
ಬಂಟ್ವಾಳ: ಸಂಘದ ಸದಸ್ಯರು ತಮ್ಮ ಕ್ಯಾಟರಿಂಗ್ ವೃತ್ತಿಯ ಬಗ್ಗೆ ಕೀಳರಿಮೆ ಬಿಟ್ಟು ಗೌರವದ ಭಾವನೆ ಬೆಳೆಸಿಕೊಳ್ಳಬೇಕು ಎಂದು ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಪ್ರಥಮ ಅಧ್ಯಕ್ಷ , ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹೇಳಿದರು.
ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಅಧ್ಯಕ್ಷ ನಾರಾಯಣ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ
ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಕ್ಯಾಟರಿಂಗ್ ವೃತ್ತಿನಿರತರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನದಲ್ಲಿದ್ದಾರೆ, ನಮ್ಮೊಳಗೆ ಯಾವುದೇ ಸ್ಪರ್ಧೆ ಬೇಡ. ನಾವೇ ಕಚ್ಚಾಟ ಮಾಡಿದ್ದಲ್ಲಿ ಮೂರನೇ ವ್ಯಕ್ತಿ ಲಾಭ ಪಡೆಯುತ್ತಾನೆ. ಗ್ರಾಕರಿಗೆ ಉತ್ತಮ ಆಹಾರ ಕೊಡಬೇಕು, ಸಮಯಕ್ಕೆ ಸರಿಯಾಗಿ ಮುಟ್ಟಿಸಬೇಕು. ಆದರೆ ದರ ಪೈಪೋಟಿ ಮಾಡಿ ಉದ್ಯಮದಲ್ಲಿ ನಷ್ಟ ಅನುಭವಿಸುವುದು ಬೇಡ ಎಂದು ಸದಸ್ಯರಿಗೆ ಸಲಹೆ ನೀಡಿದ ಅವರು ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡೋಣ ಎಂದು ತಿಳಿಸಿದರು.
ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕೊಂಚಾಡಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸದಸ್ಯರು ಉತ್ತಮ ಕೊಡುಗೆ ನೀಡಿದಾಗ ಸಂಘ ಅಭಿವೃದ್ಧಿಯಾಗುತ್ತದೆ. ಸದಸ್ಯರಿಗೆ ತೊಂದರೆಯಾದಾಗ ಸಂಘ ಅವರ ಕಷ್ಟಕ್ಕೆ ನಿಲ್ಲುತ್ತದೆ. ಪ್ರೀತಿ, ವಿಶಾಲ ಮನೋಭಾವನೆಯಿಂದ ಸದಸ್ಯರನ್ನು ನಡೆಸಿಕೊಂಡಾಗ ಸಂಘ ಬಲಿಷ್ಠಗೊಳ್ಳುತ್ತದೆ ಎಂದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚ್ಚರ್ಡ್ ಡಿಕೋಸ್ತ, ಮಾತನಾಡಿ ಕೆಟರಿಂಗ್ ಕೆಲಸ ಸೇವಾ ಕಾರ್ಯವಾಗಿದ್ದು ಯಾವುದೇ ಸಮಾರಂಭದಲ್ಲಿ ಊಟೋಪಚಾರ ಉತ್ತಮವಾಗಿದ್ದರೆ ಕಾರ್ಯಕ್ರಮ ಭಾಗಶಃ ಯಶಸ್ವಿಯಾದಂತೆ. ಆದ್ದರಿಂದ ಊಟೋಪಚಾರಕ್ಕೆ ಅತ್ಯಂತ ಮಹತ್ವ ಇದೆ ಎಂದು ತಿಳಿಸಿದರು.
ನಿರ್ಗಮನ ಅಧ್ಯಕ್ಷ ನಾರಾಯಣ ಸುವರ್ಣ ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.



ಬಂಟ್ವಾಳ ವಲಯದ ನೂತನ ಅಧ್ಯಕ್ಷರಾಗಿ ವಲೇರಿಯನ್ ಲೋಬೋ, ಪ್ರಧಾನ ಕಾರ್ಯದರ್ಶಿಯಾಗಿ ಸದಾನಂದ ಬಿ. ಬಂಗೇರ, ಕೋಶಾಧಿಕಾರಿಯಾಗಿ ಸಿಲ್ವೆಸ್ಟರ್ ಲಸ್ರಾದೋ, ಸಂಘಟನಾ ಕಾರ್ಯದರ್ಶಿಯಾಗಿ ಆ್ಯಂಟನಿ ಸಿಕ್ವೇರಾ ಅಧಿಕಾರ ಸ್ವೀಕರಿಸಿದರು.
ದೀಪ ಪ್ರಜ್ವಲನೆಯ ಮೂಲಕ ನೂತನ ತಂಡಕ್ಕೆ ಚಾಲನೆ ನೀಡಲಾಯಿತು. ನಿರ್ಗಮನ ಅಧ್ಯಕ್ಷ ನಾರಾಯಣ ಸುವರ್ಣ , ನಿರ್ಗಮನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ನಿರ್ಗಮನ ಕೋಶಾಧಿಕಾರಿ ರೋಶನ್ ಡಿಸೋಜಾ ಹಾಗೂ ಸಂಘಟನಾ ಕಾರ್ಯದರ್ಶಿ ಆ್ಯಂಟನಿ ಸಿಕ್ವೇರಾ ಅವರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನೆರವು ಕಾರ್ಯಕ್ರಮದಡಿ ವಿಕಲಚೇತನ ಸ್ವ ಉದ್ಯೋಗಿ ಪದ್ಮನಾಭ ಕುಲಾಲ್ ಪಂಜಿಕಲ್ಲು ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಸಂಘದ ನೂತನ ಸದಸ್ಯರಿಗೆ ಪ್ರಮಾಣಪತ್ರ ಹಸ್ತಾಂತರಿಸಲಾಯಿತು.
ನೂತನ ಅಧ್ಯಕ್ಷ ವಲೇರಿಯನ್ ಲೋಬೋ ಮಾತನಾಡಿ ಎಲ್ಲರ ಸಹಕಾರ, ಸಲಹೆ ಸೂಚನೆಯನ್ನು ಪಾಲಿಸುತ್ತಾ
ಸಮಾಜದ ಏಳಿಗೆಗಾಗಿ ಶ್ರಮಿಸಿ, ಎಲ್ಲರ ಸಮಸ್ಯೆಗೆ ಜೊತೆಯಾಗಿ ಸ್ಪಂದಿಸೋಣ ಎಂದರು.

ಹೊಟೇಲ್ ಉದ್ಯಮಿ ಸದಾನಂದ ಡಿ.ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.
ಕೋಶಾಧಿಕಾರಿ ರೋಷನ್ ಡಿಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವರದಿ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಆ್ಯಂಟನಿ ಸಿಕ್ವೇರಾ ವಂದಿಸಿದರು.
ಅರುಣ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
Advertisement







