
ನಿಜ ಹೇಳಬೇಕೆಂದರೆ ನನಗಾಗೊಂದು ಉದ್ಯೋಗದ ಅವಶ್ಯಕತೆಯೂ ಇತ್ತು. ಆಚಾರಕ್ಕೂ ಆಯಿತು ಸುಖಕ್ಕೂ ಆಯಿತು; ಸರಿ, ಮಂಗಳೂರಿಗೆ ಹೋದೆ. ಆಗ ನಮ್ಮ ದೊಡ್ಡಮ್ಮನ ಮಗಳೊಬ್ಬರು ಕಮರ್ಷಿಯಕ್ ಟ್ಯಾಕ್ಸ್ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದುಂಬಾಲು ಬಿದ್ದು ಅವರಲ್ಲಿ ಕೇಳಿಕೊಂಡೆ, ಹೇಗಾದರೂ ಮಾಡಿ ಒಂದು ಉದ್ಯೋಗ ದೊರಕಿಸಿ ಕೊಡಿ ಎಂಬುದಾಗಿ. ಆಗ ಅವರ ಕಛೇರಿಯಲ್ಲಿ ಟ್ಯಾಕ್ಸ್ ಆಫೀಸರ್ ಆಗಿದ್ದವರು ಮಂಜ ಅಂಪಾರ್ ಅನ್ನುವವರು. ನಮ್ಮ ಅಕ್ಕ ಅವರಿಗೆ ನನ್ನನ್ನು ಪರಿಚಯಿಸಿ ನನ್ನ ಆಶೆಯನ್ನು ಅವರ ಮುಂದಿಟ್ಟರು. ಎರಡು ದಿನ ಕಳೆದು ಮಂಗಳೂರಿನ ಸುಚಿತ್ರ ಟಾಕೀಸಿನಲ್ಲಿ ಬುಕ್ಕಿಂಗ್ ಕ್ಲರ್ಕ್ ಆಗಿ ನೇಮಕಗೊಂಡೆ. ಆಗ ನನಗೆ ಸಿಗುತ್ತಿದ್ದ ಸಂಬಳ ಕೇವಲ ನೂರು ರೂಪಾಯಿಗಳು ಮಾತ್ರ.


ಸಮಯ ಬೆಳಗ್ಗಿನ ದೇಖಾವೆಯಿಂದ ಸಂಜೆಯ ದೇಖಾವೆ ಮುಗಿಯುವವರೆಗೆ ಅಥವಾ ಮಧ್ಯಾಹ್ನದಿಂದ ರಾತ್ರೆ ಹನ್ನೆರಡು ಗಂಟೆವರೆಗೆ. ಉಳಕೊಳ್ಳುವ ವ್ಯವಸ್ಥೆ ತಲಪಾಡಿಯ ದೊಡ್ಡಮ್ಮನ ಮನೆಯಲ್ಲಿ. ಬೆಳಗ್ಗಿನ ತಿಂಡಿ ಹೇಗಿದ್ದರೂ ಅಲ್ಲೇ ಆಗುತ್ತಿತ್ತು, ಉಳಿದ ಅವಧಿಗೆ ಬುತ್ತಿ ಕಟ್ಟಿಕೊಂಡು ಬರುವುದು. ಮಧ್ಯಾಹ್ನದಿಂದ ಡ್ಯೂಟಿ ಆದರೆ ಮಲಗಲು ಟಾಕೀಸೇ ಗತಿ. ಒಂದಂತೂ ಸತ್ಯ, ಟಾಕಿಸಿನ ಕೆಲಸವಂತೂ ಯಾರಿಗೂ ಬೇಡ ಅದರಲ್ಲೂ ರಾತ್ರೆಯ ಡ್ಯೂಟಿಯಂತೂ ಬೇಡವೇ ಬೇಡ, ಗಂಗಾಸ್ನಾನ ಮಾಡಿದರೂ ಶುದ್ದಿಯಾಗಲಿಕ್ಕಿಲ್ಲ, ಅಂತಹ ಹೊಲಸು ಹಾಗೂ ಭಯಭೀತಿಯ ವಾತಾವರಣ. ಖಾಸಗಿ ವಲಯದಲ್ಲಿ ಏನು ಅನ್ಯಾಯ ಮಾಡುತ್ತಾರೆ ನೋಡಿ, ನನ್ನ ನೇಮಕ ಬುಕ್ಕಿಂಗ್ ಕ್ಲರ್ಕ್ ಆಗಿ, ಕೆಲಸ ಮಾತ್ರ ಗೇಟ್ ಕೀಪರ್ ಆಗಿ; ವ್ಯತ್ಯಾಸದ ಹಣ ಮ್ಯಾನೇಜರ್ ಕಿಸೆಗೆ, ಅದೂ ಕೂಡ ಉದ್ಯೋಗ ಬಿಟ್ಟು ಬರುವಾಗ ಒಂದು ತಿಂಗಳ ಸಂಬಳ ಕೋತ.

ಸುಚಿತ್ರಕ್ಕೆ ತಾಗಿಕೊಂಡೇ ಪ್ರಭಾತ್ ಟಾಕೀಸ್ ಇದೆ. ಅಲ್ಲೇ ಬುಕ್ಕಿಂಗ್ ವಿಂಡೋ ಬಳಿ ನಾನು ಮಲಗುವುದು. ಒಂದು ದಿನ ಸು. ಮಧ್ಯ ರಾತ್ರಿಯ ಸಮಯ, ಯಾರೋ ಕಿಟಕಿಯನ್ನು ತಳ್ಳಿದಂತಾಯ್ತು , ಮರುದಿವಸ ಕೋಲಿನಲ್ಲಿ ಕುಟ್ಟಿದಂತಾಯ್ತು. ಹೀಗೆಯೇ ಎರಡು ಮೂರು ದಿವಸ ಸಂಭವಿಸಲು ಭಯಪಟ್ಟ ನಾನು ಮುಂದಕ್ಕೆ ಕಾಲ್ನಡಿಗೆಯಲ್ಲೇ ಕೊಟ್ಟಾರ ಸಮೀಪದ ನಮ್ಮ ಮಾವನ ಮನೆಗೆ ಅಥವಾ ಅಲ್ಲೇ ಪಕ್ಕದಲ್ಲಿದ್ದ ಭಾರತಿ ಅಕ್ಕ ಅನ್ನುವವರ ಮನೆಗೆ ಹೋಗುತ್ತಿದ್ದೆ. ಎರಡು ಮೂರು ದಿವಸಗಳಾಗಿರಬಹುದೋ ಏನೋ, ಲಾಲ್ ಬಾಗ್ ಸಮೀಪ ನಾಲ್ಕು ಮಾರ್ಗ ಸೇರುವಲ್ಲಿ ಯಾರೋ ನನ್ನನ್ನು ಸಮೀಪಿಸಿದಂತಾಗಿ ಹಿಂತಿರುಗಿ ನೋಡಿದಾಗ ಎರಡು ಮೂರು ಜನ ಪೊಲೀಸರು; ಉಪ್ಪಿನಂಗಡಿಯಲ್ಲಿ ನರಕ ತೋರಿಸಿದ್ದ ಕಾರಂತರ ನೆನಪಾಯಿತು.
ಹಿಂತಿರುಗಿ ನೋಡಿದ್ದೇ ತಪ್ಪಾಯಿತೋ ಏನೋ, ಒಂದೇ ಸವನೆ ಬೆನ್ನಟ್ಟಿದರು, ನಾನು ನಿಂತೆ, ಮೈ ಥರಗುಟ್ಟುತ್ತಿದೆ ಬೆದರಿ ಬೆಂಡಾದೆ, ರಟ್ಟೆ ಹಿಡಿದು ಗದರಿಸಿದರು, ಲಾಠಿ ಎತ್ತಿದ್ದು ಮಾತ್ರ, ಅಷ್ಟಕ್ಕೇ ಎದೆ ಬಡಿತ ಕಿವಿಗೆ ಕೇಳುವಂತಾಯಿತು. ಅವರ ಕಿವಿಗೂ ಅಪ್ಪಳಿಸಿತೋ ಗೊತ್ತಿಲ್ಲ, ರಟ್ಟೆ ಸಡಿಲ ಬಿಟ್ಟರು, ಹರ್ಕಟೆ ಚೀಲ ಬಿಚ್ಚಿದರು, ಅಲ್ಲಿರುವುದು ಬುತ್ತಿ ಪಾತ್ರೆ, ಕಿಸೆಗೆ ಕೈ ಹಾಕಿದರು, ಚಿತ್ರಮಂದಿರದಿಂದ ಕೊಟ್ಟಿದ್ದ ರಾತ್ರಿ ಪಾಸ್ ಇತ್ತು, ಇದನ್ನು ನೋಡಿದ ಅವರಿಗೆ ನೆತ್ತಿಗೆ ಅಡರಿದ್ದ ಪಿತ್ತ ಕೆಳಗೆ ಇಳಿಯಿತು. ಎಚ್ಚರಿಕೆ ಕೊಟ್ಟು ಕಳುಹಿಸಿದರು. ಮರು ದಿವಸ ಈ ವಾರ್ತೆ ಟಾಕೀಸಿನ ಮೂಲೆ ಮೂಲೆಗೆ ತಲಪಿತು. ಯಾರೋ ಒಬ್ಬರು ಹೇಳಿದರು, ಬಿಳಿ ಫುಲ್ ಕೈ ಶರ್ಟ್ ಹಾಕಿ, ಹೋಗುತ್ತಾ ಇರುವಾಗ ತಿರುಗಿ ನೋಡಬೇಡಿ, ಒಂದು ವೇಳೆ ತಿರುಗಿ ನೋಡಿದರೂ ಓಡಬೇಡಿ, ಓಡಿದರೆ ಪೊಲೀಸರಿಗೆ ಸಂಶಯ ಬರುತ್ತದೆ. ಹೀಗೆಯೇ ಹಲವು ದಿನಗಳು ಉರುಳಿದವು.
ಮುಂದುವರಿಯುತ್ತದೆ..,……
ರಾಜಮಣಿ ರಾಮಕುಂಜ.
Advertisement







