
ಅದೊಂದು ನನಗೆ ಭಾವುಕ ಕ್ಷಣವೂ ಹೌದು. ಅದಾಗಲೇ ನಾನು ದಕ್ಷತಾ ವರ್ಗ, ಐಟಿಸಿ, ಓಟಿಸಿ ಮುಗಿಸಿದ್ದೆ. ಆ ಶಿಬಿರಗಳಲ್ಲೆಲ್ಲ ನಂ.ಮಧ್ವ ರಾವ್, ನ.ಕೃ ಷ್ಣಪ್ಪ, ಸು.ರಾಮಣ್ಣ, ಚಂದ್ರಶೇಖರ ಭಂಡಾರಿ, ಹೂ.ವೇ.ಶೇಷಾದ್ರಿ ಮೊದಲಾದ ಘಟಾನುಘಟಿ ರಾಷ್ಟ್ರಪ್ರೇಮಿ ವ್ಯಕ್ತಿಗಳ ವಿಚಾರಪ್ರದ ಬೌದ್ಧಿಕ್ ನಮ್ಮೆಲ್ಲರನ್ನು ನಮ್ಮ ಸಂಸ್ಕ್ರತಿ ಹಾಗೂ ರಾಷ್ಟ್ರೀಯ ವಿಚಾಧಾರೆಯ ಕುರಿತು ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು.

ಧಾರವಾಡದ ಆರ್ ಎಲ್ ಎಸ್ ಪ್ರೌಢಶಾಲೆಯಲ್ಲಿ ನಾನು ಭಾಗಿಯಾಗಿದ್ದ ಓಟಿಸಿ ಶಿಬಿರಕ್ಕೆ ಅಂದಿನ ರಾಷ್ಟ್ರೀಯ ನಾಯಕರಾಗಿದ್ದ ಎ.ಬಿ. ವಾಜಪೇಯಿ, ಎಲ್.ಕೆ.ಅಡ್ವಾಣಿ, ಜಗನ್ನಾಥ್ ರಾವ್ ಜೋಷಿ ಮೊದಲಾದವರು ಶಿಬಿರಾಂಗಣಕ್ಕೆ ಬಂದಿದ್ದ ನೆನಪು. ಅವರ ಭೇಟಿ ಅದೊಂದು ಆಕಸ್ಮಿಕ ಘಟನೆಯೆಂದೆ ನಾನಿಂದು ಭಾವಿಸಿದ್ದೇನೆ.
ಆ ಕಾಲದಲ್ಲಿ ಹೇಳಬೇಕೆಂದರೆ, ನಮ್ಮ ಊರಿನಲ್ಲಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ನ ಏಳೆಂಟು ಮನೆಗಳನ್ನು ಬಿಟ್ಟರೆ ಉಳಿದವರೆಲ್ಲ ಹುಟ್ಟಿನಿಂದಲೇ ಎನ್ನುವ ಹಾಗೆ ಜನಸಂಘದಲ್ಲಿ ತೊಡಗಿಕೊಂಡವರು. ಇತ್ತೀಚಿನವರೆಗೂ ಮಾರ್ಗದ ಬದಿಯ ಹಳೆಯ ಕಟ್ಟಡಗಳ ಗೋಡೆಗಳಲ್ಲಿ ಸುಣ್ಣದಲ್ಲಿ ಬರೆದ ಜನಸಂಘದ ದೀಪದ ಚಿಹ್ನೆಗಳು ಕಾಣಿಸುತ್ತಿದ್ದವು.


ನಮ್ಮ ಬದುಕಿಗೂ ಜನಸಂಘದ ರಾಷ್ಟ್ರೀಯ ನಾಯಕರಿಗೂ ಅದೊಂದು ಅವಿನಾಭಾವ ಸಂಬಂಧ. ಹಾಗಾಗಿಯೇ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ವಾಜಪೇಯಿ ಮೊದಲಾದವರ ಜನುಮ ದಿನಾಚರಣೆಯನ್ನು ನಾನು ಪೂಜೆ ಮಾಡಿಕೊಂಡಿದ್ದ ದೇವಳದಲ್ಲಿ ವಿವಿಧ ಸೇವೆಗಳ ಮೂಲಕ ಆಚರಿಸಿದ್ದನ್ನು ಕಂಡಿದ್ದೇನೆ. ಎಷ್ಟೋ ಮನೆಗಳಲ್ಲಿ ಇವರೆಲ್ಲರ ಭಾವಚಿತ್ರಗಳನ್ನು ನಾನು ಕಂಡದ್ದಿದೆ. ಹೆಚ್ಚಿನಂಶ ಅದಾಗಲೇ ಇರಬೇಕು, ಕೇರಳದ ಮಲಪ್ಪುರಂ ಜಿಲ್ಲೆಯನ್ನು ಮತೀಯ ಭಾವದಿಂದ ಬೇರ್ಪಡಿಸುವ ಹುನ್ನಾರ ನಡೆದಾಗ ನಮ್ಮ ತಂದೆ ಶ್ರೀನಿವಾಸ ಭಟ್, ಮಾವ ಇಜ್ಜಾವು ಸುಬ್ಬರಾವ್, ನಗ್ರಿ ವೇದವ್ಯಾಸಾಚಾರ್, ಕೆದಿಲ ಸಂಕಪ್ಪ ಭಂಡಾರಿ ಮೊದಲಾದವರು ಇದನ್ನು ವಿರೋಧಿಸಿ ಮಲಪ್ಪುರಮ್ ಜಿಲ್ಲೆಯನ್ನು ಪ್ರವೇಶಿಸಿದ್ದರು; ಜತೆಯಲ್ಲಿ, ತುದಿಬುಡವಿಲ್ಲದ ಭೂಮಸೂದೆಯ ಹೊಡೆತ ಇವೆಲ್ಲವೂ ನನ್ನನ್ನು ಎಮರ್ಜೆನ್ಸಿಯ ವಿರುದ್ಧ ಸತ್ಯಾಗ್ರಹ ಹೂಡಲು ಪ್ರೇರೇಪಿಸಿತು.
ಸಶೇಷ…….
ರಾಜಮಣಿ ರಾಮಕುಂಜ.
Advertisement







