
ಬಂಟ್ವಾಳ: ಕಲೆ ಸಾಹಿತ್ಯ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮ ಗಳನ್ನು ಸಂಘಟಿಸಿಕೊಂಡು ಬರುತ್ತಿರುವ ರಾರಾಸಂ ಫೌಂಡೇಷನ್ ಗೆ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನ.1 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾರಾಸಂ ಫೌಂಡೇಷನ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಂಗಳೂರು ಸಂಸದ ಕ್ಯಾ ಬೃಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಮೊದಲಾದ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.

ರಾರಾಸಂ ಫೌಂಡೇಶನ್ ಬಂಟ್ವಾಳ ಕಳೆದ 16 ವರ್ಷಗಳಿಂದ ಕಲೆ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಪ್ರೋತ್ಸಹಕ್ಕಾಗಿ ಕಾರ್ಯಕ್ರಮಗಳೊಂದಿಗೆ ಸೇವಾ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬರುತ್ತಿದ್ದು, ಸಂಸ್ಥೆಯ ನಿರಂತರ ಜನಪರ ಕಾರ್ಯಕ್ರಮಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊಡಮಾಡುವ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ರಾರಾಸಂ ಬಂಟ್ವಾಳ ಸಂಸ್ಥೆಗೆ ಲಭಿಸಿರುತ್ತದೆ. ಪ್ರತೀ ವರುಷ ಪುಟಾಣಿಗಳಿಂದ ಹಿರಿಯರವರೆಗೂ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮ ಕೈಗೊಳ್ಳುವ “ರಾರಾಸಂಭ್ರಮ” ಕಾರ್ಯಕ್ರಮದ ಮೂಲಕ ನೂರಾರು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಕಲರವ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಬಾಗವಹಿಸುವ ಜನಸ್ನೇಹಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಪ್ರಶಂಸನೀಯ. ಪ್ರತೀ ವರುಷ ಸಾಧಕ ಯುವ ಪ್ರತಿಭೆಗಳಿಗೆ “ರಾರಾಸಂ ಪುರಸ್ಕಾರ” ಹಾಗೂ ಸಾಧಕ ಬಂಧುಗಳಿಗೆ “ರಾರಾಸಂ ಗೌರವ ಪುರಸ್ಕಾರ” ನೀಡಿ ಅಭಿನಂದಿಸುತ್ತಿದೆ. ತಾಲೂಕಿನ ಪ್ರತಿಭೆಗಳಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯನ್ನು ಒದಗಿಸುವ ಮೂಲಕ ರಾರಾಸಂ ಫೌಂಡೇಷನ್ ಜನಪ್ರಿಯತೆಯನ್ನು ಪಡೆದುಕೊಂಡು ಅರ್ಹವಾಗಿಯೇ ಈ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನವಾಗಿದೆ.

Advertisement







