
ಬಂಟ್ವಾಳ ತಾಲೂಕಿನ ತಾಳಿತ್ತ ನೂಜಿ ನಂದ ಗೋಕುಲ ಮನೆಯಲ್ಲಿ ಕುಟುಂಬ ಸಮ್ಮಿಲನ, ಸಾಧಕರಿಗೆ ಸನ್ಮಾನ ಹಾಗೂ ನೂತನ ದಂಪತಿಗಳಿಗೆ ಅಭಿನಂದನೆ ಎನ್ನುವ ವಿಶೇಷ ಕಾರ್ಯಕ್ರಮ ನಡೆಯಿತು.
ಕುಟುಂಬದ ಹಿರಿಯರಾದ ಭುಜಂಗ ಮೂಲ್ಯ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ವಿಶ್ವನಾಥ ಕುಲಾಲ್ ಮಿತ್ತೂರು,
ಸಮಾಜ ಸೇವಕ, ಕರ್ನಾಟಕ ಐಡಲ್ ರಾಜ್ಯ ಪ್ರಶಸ್ತಿ ಪುರಸ್ಕೃತರ ಹೊಟೇಲ್ ಉದ್ಯಮಿ ಸದಾನಂದ ಬಿ. ಬಂಗೇರ, ಬಾಲಪ್ರತಿಭೆ ನಿನಾದ್ ಕೈರಂಗಳ, ಮಾಜಿ ಸೈನಿಕ ಆನಂದ ಡಿ. ತಾಳಿತ್ತನೂಜಿ ಅವರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕ ಡಾ. ಲೋಕೇಶ್ ಕುಲಾಲ್ ನಾರ್ಶ ಮಾತನಾಡಿ ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದರಿಂದ ಯುವ ಸಮುದಾಯಕ್ಕೆ ಸಾಧನೆಗಳನ್ನು ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಸಾಹಿತಿ ಈಶ್ವರ ಕುಲಾಲ್ ಮಿತ್ತೂರು ಮಾತನಾಡಿ ಪರಿವರ್ತನೆಯ ಕಾಲಘಟ್ಟದಲ್ಲಿ ಕುಟುಂಬ ವ್ಯವಸ್ಥೆಯಲ್ಲೂ ಬದಲಾವಣೆಗಳು ಉಂಟಾಗಿದೆ. ನಮಗೆ ಒಳಿತಾಗುವ ವಿಚಾರಗಳನ್ನು ಮಾತ್ರ ಸ್ವೀಕರಿಸಿ ಕುಟುಂಬದ ಒಗ್ಗಟ್ಟನ್ನು ಕಾಪಾಡುವ ಪ್ರಯತ್ನದ ಜೊತೆಗೆ ಕುಟುಂಬದ ಮನೆ, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂದವ್ಯವನ್ನು ಮೂಡಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.

ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಬಾಲಕೃಷ್ಣ, ಹಿರಿಯರಾದ ಜಯನಾಥ್ ಉಪಸ್ಥಿತರಿದ್ದರು.
ಬಳಿಕ ಏಳು ಮಂದಿ ನೂತನ ವಧು ವರರಿಗೆ ಆರತಿ ಬೆಳಗಿ, ಅರಶಿನ ಕುಂಕುಮ ಹಚ್ಚಿ, ಬಾಗಿನ ನೀಡಿ ಅಭಿನಂದಿಸಲಾಯಿತು.
ಅಶೋಕ್ ಬಾರೆಬೆಟ್ಟು, ಶುಭ ಅಶೋಕ್ ಕಾರ್ಯಕ್ರಮ ಸಂಯೋಜಿಸಿದ್ದರು. ಕೀರ್ತನ ಕೋಡಪದವು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಟುಂಬ ಸಮ್ಮಿಲನದ ಪ್ರಯುಕ್ತ ಸಹಭೋಜನ ನಡೆಯಿತು.
Advertisement







