ಮಂಗಳೂರು : ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಮತ್ತು ಸಮನ್ವಯ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ತುಂಬೆ ಪದವಿಪೂರ್ವ ಕಾಲೇಜು ತುಂಬೆಯಲ್ಲಿ ಭಾನುವಾರ ನಡೆಯಿತು. ಸಮಾರಂಭದಲ್ಲಿ ಪ್ರಧಾನ ಭಾಷಣಗಾರರಾಗಿ ಭಾಗವಹಿಸಿದ್ದ ಅಡ್ಯಾರಿನ
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ.ಮುಸ್ಥಾಫ ಬಸ್ತಿಕೋಡಿ,
ಮೌಲಾನಾ ಅಬುಲ್ ಕಲಾಂ ಆಝಾದರು , ಪ್ರಾಥಮಿಕ ಶಿಕ್ಷಣವು ಮಗುವಿನ ಹಕ್ಕಾಗಿದ್ದು ಅದು ಎಲ್ಲೆಡೆ ಮತ್ತು ಎಲ್ಲರಿಗೂ ಸಿಗುವಂತಾಗಬೇಕು ಎಂದು ಸ್ವಾತಂತ್ರ್ಯ ಪೂರ್ವದಲ್ಲೇ
ಪ್ರತಿಪಾದನೆ ಮಾಡಿ ಅದಕ್ಕಾಗಿ ದೇಶದಲ್ಲಿ ಬುನಾದಿ ಹಾಕಿದ ಮಹಾನ್ ಮೇಧಾವಿಯಾಗಿದ್ದರು ಎಂದು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು ಎಚ್ ಮಾತನಾಡಿ ಅಕಾಡೆಮಿಯು ಸಾಹಿತ್ಯ ಮತ್ತು ಸಂಸ್ಕತಿಯ ಬೆಳವಣಿಗೆಗೆ ಪೂರಕವಾದ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಬದ್ದವಾಗಿದ್ದು ಶಾಶ್ವತವಾದ ಕಛೇರಿ ಮತ್ತು ವಸ್ತು ಸಂಗ್ರಹಾಲಯ ಸ್ಥಾಪನೆಯ ಉದ್ದೇಶವನ್ನು ಹೊಂದಿದೆ. ಇದರ ಸಾಕಾರಕ್ಕಾಗಿ ಶಿಕ್ಷಕ ಸಮುದಾಯದ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಕ ಪ್ರಶಸ್ತಿಯನ್ನು ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ಅಸ್ಮಾ ಗಡಿಯಾರ್ ಅವರಿಗೆ ಪ್ರಧಾನ ಮಾಡಲಾಯಿತು. ಶಿಕ್ಷಕಿ ಹಸೀನಾ ಮಲ್ನಾಡ್ ಅವರು ಬರೆದಿರುವ ಹನಿಗಡಲು ಶೀರ್ಷಿಕೆಯ ಹನಿಗವನ ಸಂಕಲನವನ್ನು ತುಂಬೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿ.ಸುಬ್ರಮಣ್ಯ ಭಟ್ ಬಿಡುಗಡೆ ಮಾಡಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆಯನ್ನು ಹಿರಿಯ ಸಾಹಿತಿ ಅಬ್ದುಲ್ ರೆಹಮಾನ್ ಕುತ್ತೆತ್ತೂರು ಬಿಡುಗಡೆ ಮಾಡಿದರು.
ಉಪನ್ಯಾಸಕ ಅಬ್ದುಲ್ ರಝಾಕ್
ಅನಂತಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು.
ಸಂಘದ ಕೋಶಾಧಿಕಾರಿ ಮೊಹಮ್ಮದ್ ತೌಸೀಫ್ , ಬಂಟ್ವಾಳ ಘಟಕದ ಅಧ್ಯಕ್ಷ ಮೊಹಮ್ಮದ್ ಮನಾಝಿರ್ ,
ಅಕಾಡೆಮಿಯ ಸದಸ್ಯೆ ಸಾರಾ ಅಲಿ ಪರ್ಲಡ್ಕ ಉಪಸ್ತಿತರಿದ್ದರು. ಕಾರ್ಯದರ್ಶಿ ಹಾರೀಶ್ ಬಾಂಬಿಲ ಸ್ವಾಗತಿಸಿದರು. ಬ್ಯಾರಿ ಅಕಾಡೆಮಿಯ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ಧನ್ಯವಾದಗೈದರು.
ಶಿಕ್ಷಕ ಅಕ್ಬರ್ ಅಲಿ, ನೂರುದ್ದೀನ್ ಜಿ.ಎಂ, ಶಿಕ್ಷಕಿ ಫಝೀಲಾ ಕಾರ್ಯಕ್ರಮ ನಿರೂಪಿಸಿದರು.