ಬಂಟ್ವಾಳ: ರೂಟ್ ಪರ್ಮಿಟ್ ಬಸ್ಸುಗಳು ಮತ್ತು ಶಾಲಾ ಬಸ್ಸುಗಳು ಅನಧಿಕೃತವಾಗಿ ಬಾಡಿಗೆ ಮಾಡುತ್ತಿರುದನ್ನು ನಿಲ್ಲಿಸಿ ಟೂರಿಸ್ಟ್ ವ್ಯಾನ್ ಚಾಲಕ ಮಾಲಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಕೋರಿ ಆರ್ಟಿಓ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಿಗೆ ಬಂಟ್ವಾಳ ತಾಲೂಕು ಟೂರಿಸ್ಟ್ ವಾಹನ ಚಾಲಕ ಮಾಲಕರ ಸಂಘದ ವತಿಯಿಂದ ಅಧ್ಯಕ್ಷ ಸದಾನಂದ ಹಳೆಗೇಟು ಅವರ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕಿನಲ್ಲಿ ಸುಮಾರು ೮೦ಕ್ಕೂ ಹೆಚ್ಚು ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಸ್ ವಾಹನಗಳು ಇದ್ದು ಮಿನಿ ಬಸ್ ಒಂದಕ್ಕೆ 60 ಸಾವಿರ, ಟೆಂಪೋ ಟ್ರಾವೆಲರ್ಗೆ 23ಸಾವಿರದವರೆಗೆ ವಾರ್ಷಿಕ ತೆರಿಗೆಯನ್ನು ಟೂರಿಸ್ಟ್ ಪರ್ಮಿಟ್ ಆಧಾರದಲ್ಲಿ ಸರಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಈ ಟೂರಿಸ್ಟ್ ವಾಹನಗಳಿಗೆ ವಾರದಲ್ಲಿ ಒಂದು ಎರಡು ಬಾಡಿಗೆ ಆಗುತ್ತಿದ್ದು ಚಾಲಕರು ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೂಟ್ ಪರ್ಮಿಟ್ ಬಸ್ಸುಗಳು ಬಿ.ಸಿ.ರೋಡ್- ತೊಕ್ಕೊಟ್ಟು -ಮಂಗಳೂರು, ಬಿ.ಸಿ.ರೋಡು – ಕೈಕಂಬ- ಕಟೀಲ್, ಬಿ.ಸಿ.ರೋಡು- ಪಂಜಿಕಲ್ಲು- ವಾಮದಪದವು, ಬಿ.ಸಿ.ರೋಡು -ಮೂಡಬಿದ್ರೆ, ಕುಕ್ಕಾಜೆ, ಮಂಚಿ, ಸಾಲೆತ್ತೂರ್ ಬಾಕ್ರಬೈಲ್ ಹಾಗೂ ಮಂಗಳೂರಿನ ಸಿಟಿ ಬಸ್ಸುಗಳು, ಮದುವೆ ಕಾರ್ಯಕ್ರಮದ ಬಾಡಿಗೆ ಬಂಟ್ವಾಳದ ಪರಿಸರದಲ್ಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಈ ರೂಟ್ ಬಸ್ಸುಗಳಿಗೆ ಸರಕಾರದಿಂದ ರಿಯಾಯಿತಿ ತೆರಿಗೆ ಇರುವುದರಿಂದ ಕಡಿಮೆ ಬಾಡಿಗೆಗೆ ಬರುತ್ತಿದೆ. ಟೂರಿಸ್ಟ್ ತೆರಿಗೆ ಕಟ್ಟಿಯು ಟೂರಿಸ್ಟ್ ವ್ಯಾನ್ಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಆದ್ದರಿಂದ ತಾವು ಇಂತಹ ಬಸ್ಸುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭ ಸಂಘದ ಕಾರ್ಯದರ್ಶಿ ಸುನೀಲ್, ಕೋಶಾಧಿಕಾರಿ ನಮೇಶ್ ಶೆಟ್ಟಿ, ಪ್ರಮುಖರಾದ ಜಬ್ಬಾರ್ ಅಜಿಲಮೊಗರು, ಚಂದ್ರಹಾಸ್ ಸಾಲೆತ್ತೂರು, ಮ್ಯಾಕ್ಸಿಂ ಸಿಕ್ವೇರಾ ಸಜೀಪ, ಸುಧಾಕರ ತುಂಬೆ ಮತ್ತಿತರರು ಉಪಸ್ಥಿತರಿದ್ದರು.