
ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಧವಸ ಧಾನ್ಯಗಳನ್ನೊಳಗೊಂಡ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭ ಶನಿವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.


ಆಹಾರ ಕಿಟ್ ವಿತರಿಸಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸಂಜಿತ್ ಎಸ್.ಶೆಟ್ಟಿ ಮಾತನಾಡಿ, ಸೇವಾ ಕಾರ್ಯಗಳಿಗೆ ಮನಸ್ಸು ಅತಿ ಮುಖ್ಯವಾಗಿದ್ದು, ಆಗ ನಾವು ನೀಡಿದ ಸೇವೆಯೂ ಸಾರ್ಥಕತೆಯನ್ನು ಪಡೆಯುತ್ತದೆ. ಸೇವಾ ಕಾರ್ಯಗಳಲ್ಲಿ ಸೇವಾಂಜಲಿಯ ಹೆಸರು ಮುಂಚೂಣಿಯಲ್ಲಿದ್ದು, ನಿಕ್ಷಯ ಮಿತ್ರ ಯೋಜನೆಯ ಆರಂಭದಿಂದಲೂ ಬೆಂಬಲವಾಗಿ ನಿಂತ ಸಂಸ್ಥೆಯು ಕ್ಷಯ ಮುಕ್ತ ಭಾರತ ಯೋಚನೆಗೆ ಬಲುದೊಡ್ಡ ಕೊಡುಗೆ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ವಿಶೇಷವಾಗಿದ್ದು, ಅವರ ಕಾರ್ಯಕ್ಕೆ ನಾವು ಚಿರಋಣಿಗಳಾಗಿರಬೇಕು ಎಂದರು.


ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೇತನ್ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಕ್ಷಯ ರೋಗದ ನಿಯಂತ್ರಣ ಪ್ರಮಾಣ ವಾರ್ಷಿಕ ೨ ಶೇ.ದಷ್ಟಿದ್ದು, ಅದನ್ನು ೯೦ ಶೇ. ಏರಿಸಬೇಕು ಎಂಬ ಗುರಿಯೊಂದಿಗೆ ಸರಕಾರ ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಂಡಿದೆ. ಮದ್ಯಪಾನ, ಧೂಮಪಾನ, ಪೋಷಕಾಂಶ ಕೊರತೆ, ಮಧುಮೇಹ ನಿಯಂತ್ರಣ ಇಲ್ಲದಿರುವುದು, ರೋಗ ನಿರೋಧಕ ಶಕ್ತಿ ಕುಸಿತ ಮೊದಲಾದ ಕಾರಣದಿಂದ ಕ್ಷಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರಗಳ ಕುರಿತು ಎಚ್ಚರಿಕೆ ಅಗತ್ಯ ಎಂದರು.

ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಪ್ರಸ್ತಾವನೆಗೈದು, ಕೇಂದ್ರ ಸರಕಾರವು ೨೦೨೫ಕ್ಕೆ ಕ್ಷಯ ರೋಗ ಮುಕ್ತ ಭಾರತದ ಗುರಿಹೊಂದಿದ್ದು, ಅದಕ್ಕೆ ಪೂರಕವಾಗಿ ಸೇವಾಂಜಲಿ ಕಳೆದ ೨೫ ತಿಂಗಳಿನಿಂದ ನಿರಂತರವಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿದ್ದು, ಈವರೆಗೆ ಸುಮಾರು ೮.೫೦ ಲಕ್ಷ ರೂ.ಗಳಲ್ಲಿ ೧೩೫ ಮಂದಿಗೆ ಕಿಟ್ ವಿತರಿಸಲಾಗಿದೆ ಎಂದರು.
ಎಸ್ಸಿಡಿಸಿಸಿ ಬ್ಯಾಂಕ್ ಫರಂಗಿಪೇಟೆ ಶಾಖೆಯ ಮ್ಯಾನೇಜರ್ ರೂಪಲತಾ, ಲಯನ್ಸ್ ಕಾರ್ಯದರ್ಶಿ ಮನೋರಂಜನ್ ಕರೈ, ಧಾರ್ಮಿಕ ಮುಂದಾಳು ಉಮೇಶ್ ಸಾಲ್ಯಾನ್ ಬೆಂಜನಪದವು ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೃಷ್ಣ ತುಪ್ಪೆಕಲ್ಲು, ಬಿ.ನಾರಾಯಣ ಮೇರಮಜಲು, ಶಿವರಾಜ್ ಸುಜೀರು, ವಿಕ್ರಂ ಬರ್ಕೆ, ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ಉಮಾ ಚಂದ್ರಶೇಖರ್, ಗಾಯತ್ರಿ, ಉಮೇಶ್ ಆಚಾರ್ ಉಪಸ್ಥಿತರಿದ್ದರು. ಟ್ರಸ್ಟಿ ಬಿ.ದೇವದಾಸ್ ಶೆಟ್ಟಿ ಕೊಡ್ಮಾಣ್ ಸ್ವಾಗತಿಸಿ, ವಂದಿಸಿದರು.
—
