ಬಂಟ್ವಾಳ : ದಿನವಿಡಿ ಕರ್ತವ್ಯದ ಒತ್ತಡದಿಂದ ಬ್ಯುಸಿ ಆಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭಾನುವಾರ ಯುವಕರೊಂದಿಗೆ ಕೆಸರು ಗದ್ದೆಯಲ್ಲಿ ಆಡಿ ಸಂಭ್ರಮಿದರು. ಅನಂತಾಡಿ ಗ್ರಾಮದ ನವ ಭಾರತ್ ಯುವಕ ಸಂಘ ಅನಂತಾಡಿ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಜರಗಿದ 6 ನೇ ವರ್ಷದ ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧಿಕಾರದ ಹಮ್ಮು ಬಿಮ್ಮುಗಳನ್ನು ಬಿಟ್ಟು ಮಕ್ಕಳ ಜೊತೆ ಮಗುವಾಗಿ ಬೆರೆತು ಮಣ್ಣಿನ ಮಗನಾದರು. ಜಿಲ್ಲಾಧಿಕಾರಿ ಕೆಸರಿನಲ್ಲೂ ಮಕ್ಕಳ ಜೊತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು.
ಈ ಸಂದರ್ಭ ಮಾತನಾಡಿದ ಅವರು ದೇಶದ ಬೆನ್ನೆಲುಬಾಗಿರುವ ರೈತ ಸಂತೋಷವಾಗಿದ್ದರೆ ಇಡೀ ಜಗತ್ತೇ ಸಂತೋಷವಾಗಿರುತ್ತದೆ. ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವು ನೀಗಿಸುವ ರೈತ ಯಾವಾಗಲೂ ಸಂತೋಷವಾಗಿರಬೇಕು ಎಂದು ತಿಳಿಸಿದರು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ. ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ವಹಿಸಿದ್ದರು. ಕಾರ್ಯಕ್ರಮದ ಧ್ವಜಾರೋಹಣವನ್ನು ಡಾ. ರೂಪಲತಾ ಕೊಂಗಲಾಯಿ ನೆರವೇರಿಸಿ , ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ಉದ್ಘಾಟಿಸಿದರು. ದ.ಕ. ಜಿಲ್ಲಾ ಸರಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಯೇ ಕ್ರೀಡಾಕೂಟ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣಮೂಲ್ಯ, ಮಲ್ಲರಾಯ ದೈವ ಪರಿಚರಕರು ಗಳಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣ ಪೂಜಾರಿ ಬಾಕಿಲ, ಪದ್ಮನಾಭ ಪೂಜಾರಿ ಈಡೆಮುಂಡೆವು ಮೊದಲಾದವರು ಉಪಸ್ಥಿತರಿದ್ದರು.
ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಚಾಪೆ ನೇಯುವುದು , ಬುಟ್ಟಿ ನೇಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನ ಗರಿ ನೇಯುವುದು, ಅಕ್ಕಿ ಮುಡಿ ಕಟ್ಟುವ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.