ಬಂಟ್ವಾಳ: 12 ವರ್ಷಗಳಿಂದ ಸ್ವಚ್ಚಗೊಳಿಸದೇ ಉಳಿದಿದ್ದ ನಾವೂರು ಗ್ರಾಮದ ಕುಡಿಯುವ ನೀರು ಪೂರೈಸುವ ಮೇಲ್ಸ್ಥರದ ಟ್ಯಾಂಕನ್ನು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣ ಘಟಕದ ನಾವೂರು ಶೌರ್ಯ ತಂಡ ಶ್ರಮದಾನದ ಮೂಲಕ ಶುಚಿಗೊಳಿಸಿದೆ.
ನಾವೂರು ಶಾಲೆಯ ಬಳಿ ನೇತ್ರಾವತಿ ನದಿ ಸಮೀಪದ ಎತ್ತರ ಪ್ರದೇಶದಲ್ಲಿ ನಾವೂರು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಇದೆ. ಟ್ಯಾಂಕ್ನ ಸುತ್ತಮುತ್ತ ಕಳೆಗಿಡಗಳು, ಪೊದೆಗಳು ಬೆಳೆದು ಹತ್ತಿರಕ್ಕೆ ಹೋಗಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಟ್ಯಾಂಕನ್ನು ಸ್ವಚ್ಚಗೊಳಿಸದೇ 12 ವರ್ಷಗಳೇ ಕಳೆದಿವೆ ಎನ್ನುತ್ತಾರೆ ಸ್ಥಳೀಯರು. ಇದನ್ನರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಕಳೆಗಿಡಗಳನ್ನು ಯಂತ್ರದ ಮೂಲಕ ತುಂಡರಿಸಿ ಪರಿಸರವನ್ನು ಸ್ವಚ್ಚಗೊಳಿಸುವುದರ ಜೊತೆಗೆ ಟ್ಯಾಂಕನ್ನು ಸ್ವಚ್ಚಗೊಳಿಸಲಾಯಿತು. ಟ್ಯಾಂಕ್ನಲ್ಲಿ ಕೊಚ್ಚೆಯಂತೆ ತುಂಬಿಕೊಂಡಿದ್ದ ಕೆಸರು ಪೈಪ್ ಮೂಲಕ ಹೊರ ಚೆಲ್ಲಲ್ಪಟ್ಟಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನಾಧಿಕಾರಿ ಬಾಲಕೃಷ್ಣ, ಮೇಲ್ವಿಚಾರಕಿ ರೂಪ ಜೆ. ಭೇಟಿ ನೀಡಿದರು. ಶೌರ್ಯ ತಂಡದ ಅಧ್ಯಕ್ಷ ಭಾಸ್ಕರ್, ಸೇವಾ ಪ್ರತಿನಿಧಿಗಳಾದ ವಿಜಯ, ವಸಂತಿ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ಗೌಡ ನಾವೂರು, ನಾವೂರು ಗ್ರಾ.ಪಂ. ಸದಸ್ಯರಾದ ತ್ರಿವೇಣಿ, ಜನಾರ್ದನ ಹಾಗೂ ಶೌರ್ಯ ತಂಡದ ಸದಸ್ಯರು ಶ್ರಮದಾನದಲ್ಲಿ ತೊಡಗಿಸಿಕೊಂಡರು.