ಬಂಟ್ವಾಳ: ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಮಾತಾ ಚರ್ಚಿನಲ್ಲಿ ಕನ್ಯಾ ಮಾತೆಯ ಹುಟ್ಟುಹಬ್ಬದ ದಿನವಾದ (ಮೋಂತಿ ಫೆಸ್ತ್) ಭಾನುವಾರ ತೆನೆಹಬ್ಬ ವನ್ನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ, ಲೋರೆಟ್ಟೋ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಂದನೀಯ ಜೇಸನ್ ಮೋನಿಸ್ ಪ್ರಧಾನ ಧರ್ಮಗುರುಗಳಾಗಿ ವಂದನೀಯ ಗ್ಲ್ಯಾಡ್ವಿನ್ ಫೆರ್ನಾಂಡಿಸ್ ಹಾಗೂ ಗುಜರಾತ್ ಧರ್ಮ ಪ್ರಾಂತ್ಯದಲ್ಲಿ ಸೇವೆ ನೀಡುತ್ತಿರುವ ವಂದನೀಯ ಜೇಮ್ಸ್ ವಾಸ್, ವಂದನೀಯ ಜೆರಾಲ್ಡ್ ಪೀಟರ್ ಲೋಬೊ ಬಲಿಪೂಜೆಯನ್ನು ಅರ್ಪಿಸಿದರು.
ಪ್ರಧಾನ ಧರ್ಮಗುರುಗಳು ದೇವರ ವಾಕ್ಯದ ಸಂದೇಶದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ತ್ಯಾಗಮಯ ಜೀವನದ ಬಗ್ಗೆ ಪ್ರವಚನ ನೀಡಿದರು. ಪೂಜೆಯಲ್ಲಿ ಮಕ್ಕಳು, ಭಕ್ತಾದಿಗಳು ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡರು. ಕನ್ಯಾಮಾತೆಯ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಕ್ತಿಯಿಂದ ಪಾಲ್ಗೊಂಡರು.
ಕಳೆದ ೯ ದಿನಗಳಿಂದ ನಡೆದ ಮಾತೆ ಮರಿಯಮ್ಮನವರ ನೋವೆನಾ ಪ್ರಾರ್ಥನೆಗೆ ಮಕ್ಕಳು ಹೂಗಳನ್ನು ಅರ್ಪಿಸಿದರು.
ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಭತ್ತದ ತೆನೆಯನ್ನು ನೀಡಿ ಗೌರವಿಸಲಾಯಿತು. ಬಲಿ ಪೂಜೆ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಕಬ್ಬನ್ನು ನೀಡಲಾಯಿತು. ಮಾತೆ ಮರಿಯಮ್ಮನವರ ಪಲ್ಲಕ್ಕಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಚರ್ಚ್ ವತಿಯಿಂದ ಧರ್ಮಗುರುಗಳು ಸನ್ಮಾನಿಸಿದರು.
—