ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ 2023-24ನೇ ಸಾಲಿನಲ್ಲಿ 982.54 ಕೋಟಿ ವ್ಯವಹಾರ ನಡೆಸಿ 5.71 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.
ಸಂಘದ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ ಡಾ. ಅಮ್ಮೆಂಬಳ ಬಾಳಪ್ಪ ಹಾಗೂ ಬಿ. ಹೂವಯ್ಯ ಮೂಲ್ಯ ಅವರಿಂದ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಪ್ರಸ್ತುತ 8660 ಸದಸ್ಯರಿದ್ದು, 7.87 ಕೋಟಿ ಪಾಲು ಬಂಡವಾಳ, 214.26 ಕೋಟಿ ಠೇವಣಾತಿ, 5.68 ಕೋಟಿ ನಿಧಿಗಳು, 59.82 ಕೋಟಿ ವಿನಿಯೋಗಗಳು, 192.78 ಕೋಟಿ ಸಾಲ ಹೊಂದಿದ್ದು ಶೇ. 95.02 ವಸೂಲಾತಿಯಾಗಿದೆ. ಸಂಘದ ದುಡಿಯವ ಬಂಡವಾಳ 239.90 ಕೋಟಿಯಾಗಿದ್ದು ಆಡಿಟ್ ವರ್ಗಿಕರಣದಲ್ಲಿ ಎ ತರಗತಿಯನ್ನು ಪಡೆದು ಕೊಂಡಿದೆ ಎಂದರು.
ಬಂಟ್ವಾಳ, ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಸೀಮಿತವಾಗಿದ್ದ ಸಂಘದ ಕಾರ್ಯಾವ್ಯಾಪ್ತಿಯನ್ನು ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗೆ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ 4 ಹೊಸ ಶಾಖೆಗಳನ್ನು ಆರಂಭಿಸಲು ಹಾಗೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆಯನ್ನು ಆಡಳಿತ ಮಂಡಳಿ ಮಾಡಿದೆ ಎಂದರು. ಗ್ರಾಹಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಆನ್ಲೈನ್ ಮುಖಾಂತರ ಸೇವೆಯನ್ನು ನೀಡುವ ಬಗ್ಗೆ ಯೋಜನೆ ರೂಪಿಸಿದ್ದು, ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಅಳವಡಿಸಲಾಗಿದೆ. ಸಂಘದಲ್ಲಿ 241 ಅಮೂಲ್ಯ ಸ್ವಸಹಾಯ ಗುಂಪುಗಳಿದ್ದು 2207 ಸದಸ್ಯರು ಸಕ್ರಿಯವಾಗಿ ವ್ಯವಹರಿಸಿ 83.63 ಲಕ್ಷ ರೂಪಾಯಿ ಉಳಿತಾಯ ಮಾಡಿದ್ದಾರೆ. ಸಂಘದ ಸರ್ವತೋಮುಖ ಅಭಿವೃದ್ಧಿಯನ್ನು ಪರಿಗಣಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನ ಪ್ರಶಸ್ತಿಯನ್ನು ನೀಡಿದೆ ಎಂದು ತಿಳಿಸಿದ ಅವರು ಸಂಘದ 2023-24ನೇ ಸಾಲಿನ ಮಹಾಸಭೆಯು ಸೆ.1ರಂದು ಬಿ.ಸಿ. ರೋಡಿನ ಸ್ಪರ್ಶಾಕಲಾ ಮಂದಿರದಲ್ಲಿ ನಡೆಯಲಿದೆ ಎಂದರು.
ಸುದ್ದಿಗೊಷ್ಟಿಯಲ್ಲಿ ಉಪಾಧ್ಯಕ್ಷ ಪದ್ಮನಾಭ ವಿಟ್ಲ, ನಿರ್ದೇಶಕರಾದ ಜನಾರ್ದನ ಬೊಂಡಾಲ, ಸುರೇಶ ಎನ್., ರಮೇಶ್ ಸಾಲ್ಯಾನ್, ನಾಗೇಶ್ ಬಾಳೆಹಿತ್ಲು, ಪ್ರಧಾನ ವ್ಯವಸ್ಥಾಪಕ ಭೋಜಮೂಲ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ಉಪಸ್ಥಿತರಿದ್ದರು.