ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಲ್ಲಡ್ಕ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ ಹಾಗೂ ಸರಕಾರಿ ಪ್ರೌಢ ಶಾಲೆ ಗೋಳ್ತಮಜಲು ಇದರ ಸಂಯುಕ್ತ ಆಶ್ರಯದಲ್ಲಿ ಗೋಳ್ತಮಜಲುವಿನಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಬುಧವಾರ ನಡೆಯಿತು.
ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ವಲಯ ತರಬೇತುದಾರ, ಪತ್ರಕರ್ತ ಸಂದೀಪ್ ಸಾಲ್ಯಾನ್ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು. ಹದಿಹರೆಯದ ವಯಸ್ಸಿನಲ್ಲಿ ಅನೇಕ ಆಕರ್ಷಣೆಗಳು ನಮ್ಮನ್ನು ಸೆಳೆಯುತ್ತದೆ. ಕೆಟ್ಟ ಕುತೂಹಲಕ್ಕೆ ಒಳಗಾಗಿ ದುಶ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳದಂತೆ ಎಚ್ಚರ ವಹಿಸಿ ಎಂದು ತಿಳಿಸಿದರು. ಮಾದಕ ವ್ಯಸನಗಳಿಗೆ ದಾಸರಾಗುವುದರಿಂದ ವೈಯಕ್ತಿಕ ಆರೋಗ್ಯ ಹದಗೆಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವೂ ಹದಗೆಡುತ್ತದೆ. ನಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಯವನ್ನು ಕಾಪಾಡುವ ಮಹತ್ತರವಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳನ್ನು ಸೇವನೆಗೆ ತುತ್ತಾಗದೆ ಕ್ರೀಡೆ, ಯೋಗ, ಸಂಗೀತದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.ಬಳಿಕ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಶಾಲಾ ಮುಖ್ಯ ಶಿಕ್ಷಕ ರಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯ ಚಿನ್ನಾ ಕಲ್ಲಡ್ಕ, ಶಾಲಾ ಶಿಕ್ಷಕಿ ಶಶಿಕಲಾ, ಯೋಜನೆಯ ಗದಗ ಜಿಲ್ಲಾ ತರಬೇತಿ ಮೇಲ್ವಿಚಾರಕಿ ಹೇಮಲತಾ ಉಪಸ್ಥಿತರಿದ್ದರು. ಶಿಕ್ಷಕಿ ಸುನಿತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ವಿದ್ಯಾ ವಂದಿಸಿದರು. ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
—