
ಬಂಟ್ವಾಳ: ಜನರ ಹಣ ಜನರ ಕೈ ಸೇರಬೇಕು, ರಾಜ್ಯದ ಪ್ರತಿಯೊಬ್ಬರೂ ಕೂಡ ನಾಗರೀಕ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರಕಾರದ ಬೊಕ್ಕಸ ಖಾಲಿಯಾಗುತ್ತದೆ ಎನ್ನುವ ಟೀಕೆಯ ನಡುವೆಯೂ ಎಲ್ಲಾ ಗ್ಯಾರಂಟಿ ಯೋಜನೆಗಳನನು ಸರಕಾರ ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.


ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಶನಿವಾರ ಮದ್ಯಾಹ್ನ ನಡೆದ ಬಂಟ್ವಾಳ ತಾಲೂಕು ವ್ಯಾಪ್ತಿಯ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಪ್ರಮಾಣ ವಚನ ಮಾಡಿದ ದಿನದಂದೆ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೫ ಗ್ಯಾರಂಟಿಗಳ ಘೋಷಣೆ ಮಾಡಿದರು.

ಯುವನಿಧಿ ಯೋಜನೆಯ ಮೂಲಕ ಯುವಕ ಯುವತಿಯರಿಗೆ ಶಕ್ತಿ ತುಂಬುವ ಕಾರ್ಯ ಆಗಿದೆ. ಅನ್ನ ಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿದೆ. ಬಿಪಿಎಲ್ ಖಾತೆಗೆ ೫ ಕೆ.ಜಿ ಅಕ್ಕಿಯ ಹಣ ಬರುತ್ತಿದ್ದು ಜನರಿಗೆ ಪ್ರಯೋಜನವಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಸಬಲರಾಗಿದ್ದಾರೆ ಎಂದರು. ರಾಜ್ಯದ ಪ್ರತೀ ಜನತೆಗೆ ಸರಕಾರದ ಒಂದಲ್ಲ ಒಂದು ಗ್ಯಾರಂಟಿ ತಲುಪುತ್ತಿದೆ, ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ ಎಂದ ಅವರು ಭಾವನೆಗಳಿಂದ ಕುಟುಂಬದ ಜೀವನ ನಡೆಯುದಿಲ್ಲ. ಬದಲಾಗಿ ಬದುಕು ನಡೆಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅಂತಹ ಕಾರ್ಯವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮಾತನಾಡಿ ಚುನಾವಣೆಯ ಪ್ರಣಾಳಿಕೆಗಳು ಈಡೇರ ಬೇಕಾದರೆ ಅದು ಕಾಯ್ದೆಗಳಾಗಿ ಹೊರ ಬರಬೇಕು, ಇಂದು ಸರಕಾರದ ಗ್ಯಾರಂಟಿ ಯೋಜನೆಗಳು ಕಾಯ್ದೆಗಳಾಗಿ ಅಧಿಕಾರಿಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಆಗುತ್ತಿದೆ ಎಂದರು. ಜಿಎಸ್ಟಿ ತುಂಬುವ ಪೈಕಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಾಜ್ಯದ ಬೊಕ್ಕಸ ದಿವಾಳಿಯಾಗುತ್ತಿದ್ದರೆ ಅಷ್ಟು ಜಿಎಸ್ಟಿ ಕಟ್ಟಲು ಸಾಧ್ಯವೆ? ಎಂದು ಪ್ರಶ್ನಿಸಿದ ಅವರು ಬಡವರಿಗೆ ಸೌಲಭ್ಯ ನೀಡಿದರೆ ದಿವಾಳಿಯಾಗುವುದಿಲ್ಲ ಎಂದು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ , ಸಹಾಯಕ ಆಯುಕ್ತ ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ , ಪಿಡಬ್ಲ್ಯುಡಿ ಎಇಇ ಜಯಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ ಸಿಡಿಪಿಓ ಮುಮ್ತಾಝ್, ಮೆಸ್ಕಾಂ ಎಇಇ ನಾರಾಯಣ ಭಟ್, ಕೆಎಸ್ಆರ್ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಜಯಕರ್ ಶೆಟ್ಟಿ, ತಹಶೀಲ್ದಾರ್ ಅರ್ಚನ ಭಟ್ ವಿವಿಧ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಫಲನುಭವಿಗಳಾದ ಅನಿತಾ ಡೇಸಾ, ಸರೋಜಿ ಸರಪಾಡಿ, ಗಿರೀಶ್ ಪೆರ್ವ, ಶಬನಾ ಶೇಖ್, ವೀಣಾ ಕೊಳ್ನಾಡು, ಹುಸೈನ್ ಅನಿಸಿಕೆ ವ್ಯಕ್ತಪಡಿಸಿದರು
ತಹಶೀಲ್ದಾರ್ ಅರ್ಚನಾ ಡಿ. ಭಟ್ ಸ್ವಾಗತಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಹಾಗೂ ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.
