ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317 ಡಿ ಲಯನ್ಸ್ ಪ್ರಾಂತ್ಯ ೫ರ ಪ್ರಾಂತೀಯ ಸಮ್ಮಿಲನ ‘ಸಂಧ್ಯಾ’ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರ ನೇತೃತ್ವದಲ್ಲಿ, ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಇವರ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕೊಳ್ಳಾಡು ಸಾಲೆತ್ತೂರು ಇದರ ಆತಿಥ್ಯದಲ್ಲಿ ಇರಾ ಬಂಟರ ಭವನದ ಬಿ. ವಿ. ಕಾರಂತ ವೇದಿಕೆಯಲ್ಲಿ ಸೇವಾ ಸಾರ್ಥಕ್ಯದ ಹೊಂಗಿರಣ ಶೀರ್ಷಿಕೆಯೊಂದಿಗೆ ವಿನೂತನ ರೀತಿಯಲ್ಲಿ ಭಾನುವಾರ ಸಂಜೆ ನಡೆಯಿತು.
ಪ್ರಾಂತೀಯ ಪ್ರಥಮ ಮಹಿಳೆ ಸಂಧ್ಯಾ ರಮಾನಂದ ತೆಂಗಿನ ಗಿಡಕ್ಕೆ ನೀರು ಎರೆದು ಬಳಿಕ ವೇದಿಕೆಯಲ್ಲಿ ದೀಪಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭಕೋರಿದರು.
ಪ್ರಧಾನ ಅತಿಥಿಯಾಗಿದ್ದ ಸರಕಾರಿ ಪದವಿಪೂರ್ವ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಪ್ರೌಢಶಾಲಾ ವಿಭಾಗದ ಅಧ್ಯಾಪಕ ಮಹೇಶ್ ಕುಮಾರ್ ವಿ. ಕರ್ಕೇರ ಮಾತನಾಡಿ ಜಗತ್ತು ಭೂಮಿಯನ್ನು ನಪುಂಸಕ ಲಿಂಗದಿಂದ ಕರೆದರೆ ತಾಯಿ ಎನ್ನುವ ಮಾತೃಭಾವದಿಂದ ನಮ್ಮ ದೇಶದ ಹಿರಿಯರು ಕರೆದರು. ನೆಲದ ಮೆಲೆ ನಿಂತು ಆಕಾಶ ನೋಡಿ ಯಾವ ಯಾವ ಗ್ರಹಗಳು ಎಲ್ಲೆಲ್ಲಿವೆ ಎನ್ನುವುದನ್ನು ತಿಳಿಸಿಕೊಟ್ಟವರು ನಮ್ಮ ಹಿರಿಯರು. ಕೈ ಮುಗಿದು ಹೃದಯಲ್ಲಿ ದೇವರನ್ನು ಸಾಕ್ಷತ್ಕರಿಸುವ ಸಾಂಸ್ಕೃತಿಕ ಭೂಮಿಕೆಯನ್ನು ಕಟ್ಟಿಕೊಟ್ಟವರು ನಮ್ಮ ಹಿರಿಯರು, ಚರಾಚರ ವಸ್ತುಗಳಲ್ಲಿ ದೇವರನ್ನು ಕಂಡು ಕೊಂಡವರು ನಮ್ಮ ಹಿರಿಯರು, ಜಗತ್ತಿಗೆ ಆಯುರ್ವೇದ, ಯೋಗ, ಶೂನ್ಯ ಪರಿಚಯಿಸಿದವರು ನಮ್ಮ ಹಿರಿಯರು. ಆದ್ದರಿಂದ ನಮ್ಮ ದೇಶದ ಹಿರಿಯರ ಬಗ್ಗೆ ಯುವ ಸಮುದಾಯ ತಿಳಿದುಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಮಾತಾನಾಡಿ ನನ್ನ ಪ್ರಾಂತ್ಯದಲ್ಲಿರುವ ಎಲ್ಲಾ ಕ್ಲಬ್ಗಳು ಹಳ್ಳಿಯ ಕ್ಲಬ್ಗಳು. ಇವತ್ತು ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಜಿಲ್ಲೆಗೆ ತಮ್ಮ ಸಾಧನೆಯನ್ನು ತೋರಿಸಿಕೊಟ್ಟಿದ್ದಾರೆ. ಬಹುದಿನಗಳ ಕನಸು ನಸಾಗಿದೆ. ಅರ್ಥಗರ್ಭಿತವಾದ, ಅಚ್ಚುಕಟ್ಟಾದ ಕಾರ್ಯಕ್ರಮ ಮೂಡಿ ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೇವೆಯ ಮೂಲಕ ಗುರುತಿಸಿಕೊಂಡಿರುವ ಐವರು ಸಾಧಕರಾದ ಹೊಟೇಲ್ ಉದ್ಯಮಿ ಸೂರ್ಯನಾರಾಯಣ ರಾವ್ ಪತ್ತುಮುಡಿಯವರಿಗೆ ಲಯನ್ಸ್ ಉದ್ಯಮ ಭೂಷಣ ಪ್ರಶಸ್ತಿ, ಬೀಡಿ ಉದ್ಯಮಿ ಸುಲೈಮಾನ್ ಹಾಜಿಯವರಿಗೆ ಲಯನ್ಸ್ ಉದ್ಯಮ ಸೌರಭ ಪ್ರಶಸ್ತಿ, ಉದ್ಯಮಿ ಸತೀಶ್ ಕುಮಾರ್ ಆಳ್ವರವರಿಗೆ ಲಯನ್ಸ್ ಉದ್ಯಮ ತಿಲಕ ಪ್ರಶಸ್ತಿ, ಉದ್ಯಮಿ ಸುಧಾಕರ ಆಚಾರ್ಯರಿಗೆ ಲಯನ್ಸ್ ಉದ್ಯಮ ರತ್ನ ಪ್ರಶಸ್ತಿ, ಶಿಕ್ಷಕ ಉಮಾನಾಥ ರೈ ಮೇರಾವು ಇವರಿಗೆ ಲಯನ್ಸ್ ಶಿಕ್ಷಣ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ, ನಿಕಟಪೂರ್ವ ರಾಜ್ಯಪಾಲ, 1ನೇ ಉಪರಾಜ್ಯಪಾಲೆ ಭಾರತಿ, 2ನೇ ಉಪರಾಜ್ಯಪಾಲ ಕುಡುಪಿ ಅರವಿಂದ ಶೆಣೈ ನಿಕಟಪೂರ್ವ ಮಲ್ಟಿಪಲ್ ಕೌನ್ಸಿಲ್ ಚೆಯರ್ಮನ್ ವಸಂತಕುಮಾರ್ ಶೆಟ್ಟಿ ಶುಭಾಶಂಸನೆಗೈದರು.
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು, ಸರಕಾರಿ ಪ್ರೌಢಶಾಲೆ ಮಂಚಿ ಕುಕ್ಕಾಜೆ, ಸರಕಾರಿ ಪ್ರೌಢಶಾಲೆ ಸಾಲೆತ್ತೂರು, ಸರಕಾರಿ ಪ್ರೌಢಶಾಲೆ ಕಾಡುಮಠ ಇಲ್ಲಿಗೆ ಪ್ರಾಂತ್ಯದ ವತಿಯಿಂದ ಸೇವಾಚಟುವಟಿಕೆಯಂಗವಾಗಿ ಕೊಡುಗೆಗಳನ್ನು ನೀಡಲಾಯಿತು. ಸಮ್ಮಿಲನ ಸಮಿತಿಯ ಗೌರವಾಧ್ಯಕ್ಷ ಡಾ. ಗೋಪಾಲ್ ಆಚಾರ್ ದಂಪತಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಹಾಗೂ ಪ್ರಾಂತೀಯ ಪ್ರಥಮ ಮಹಿಳೆ ಸಂಧ್ಯಾ ರಮಾನಂದ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಎಲ್ಸಿಐಎಫ್ಗೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಗೌರವ ಮಾರ್ಗದರ್ಶಕ ಕೆ. ದೇವದಾಸ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ವಿಠಲ ಕುಮಾರ್ ಶೆಟ್ಟಿ, ಗೌರವ ಸಲಹೆಗಾರ ಮನೋರಂಜನ್ ಕೆ.ಆರ್. ಕೋಶಾಧಿಕಾರಿ ರಾಮ್ಪ್ರಸಾದ್ ರೈ, ಪ್ರಾಂತೀಯ ಸಂಯೋಜಕ ವಿಜಯ ರೈ.ಕೆ. ವಲಯಾಧ್ಯಕ್ಷರಾದ ಯುಜೀನ್ ಲೋಬೊ, ಡೊನಾಲ್ಡ್ ಬಂಟ್ವಾಳ್, ಪ್ರಕಾಶ್ಚಂದ್ರ ಆಳ್ವ, ಸತೀಶ್ ಭಂಡಾರಿ, ಆತಿಥೇಯ ಕ್ಲಬ್ನ ಅಧ್ಯಕ್ಷೆ ರಮಾ.ಜಿ.ಆಚಾರ್ ಹಾಗೂ ವಿವಿಧ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸಹಕರಿಸಿದರು.
ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ, ಎಕ್ಟ್ರೀಮ್ ಡ್ಯಾನ್ಸ್ ಕ್ರೂ ಬಿ.ಸಿ.ರೋಡು ಹಾಗೂ ಸರಕಾರಿ ಪೌಢಶಾಲೆ ಮಂಚಿ ಇಲ್ಲಿನ ಮಕ್ಕಳಿಂದ ನಡೆದ ವೈವಿಧ್ಯಮಯ ನೃತ್ಯ ಪ್ರದರ್ಶನ ಪ್ರೇಕ್ಷರ ಮನೋರಂಜಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಬಂಟರ ಭವನದ ಒಳಾಂಗಣದಲ್ಲಿ ಪ್ರಾಂತ್ಯ 5ರ ಕ್ಲಬ್ಗಳಾದ ಕೊಳ್ಳಾಡು ಸಾಲೆತ್ತೂರು, ಬಂಟ್ವಾಳ, ಮಂಗಳಗಂಗೋತ್ರಿ, ಚೋಟಮಂಗಳೂರು, ಲೊರೆಟ್ಟೋ ಅಗ್ರಾರ್, ಮುಡಿಪು ಕುರ್ನಾಡು, ವಾಮದಪದವು ಪ್ರಕೃತಿ, ವಿಟ್ಲ ಸಿಟಿ, ರಾಯಿ ಸಿದ್ಧಕಟ್ಟೆ ಹಾಗೂ ಅಮ್ಟೂರು ಕ್ಲಬ್ಗಳಿಂದ ವಿವಿಧ ಸಾಮಾಜಿಕ ಜಾಗೃತಿಯ ಸಂದೇಶಗಳನ್ನು ನೀಡುವ ಬ್ಯಾನರ್ ಪ್ರಸ್ತುತಿ ನಡೆಯಿತು.
ಪ್ರಾಂತೀಯ ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ. ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಸಮ್ಮಿಲನ ಸಮಿತಿ ಕಾರ್ಯದರ್ಶಿ ಜಯಪ್ರಕಾಶ್ ರೈ ಮೇರಾವು ವಂದಿಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯರಾದ ರಾಧಕೃಷ್ಣ ಬಂಟ್ವಾಳ್ ಹಾಗೂ ಸುಜಾತ ಕುಮಾರಿ ವಂದಿಸಿದರು.