ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರು ಸಮೃದ್ದವಾಗಿದ್ದು, ೧೬೦ ಎಂಎಲ್ಡಿ ನೀರು ಮಂಗಳೂರಿಗೆ ಸರಬರಾಜಾಗುತ್ತಿದೆ. ಉಳ್ಳಾಲ, ಮೂಲ್ಕಿಯ ಜೊತೆಗೆ ಸುತ್ತಲಿನ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರು ಒದಗಿಸುವ ಜೀವನದಿ ನೇತ್ರಾವತಿ ಫೆಬ್ರವರಿ ತಿಂಗಳಿನಲ್ಲಿಯೂ ಪೂರ್ಣವಾಗಿ ತುಂಬಿಕೊಂಡು ಡ್ಯಾಂನ ಒಂದು ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರಗೆ ಹರಿಯಲು ಬಿಡುತ್ತಿದ್ದೇವೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಅವರು ತುಂಬೆ ವೆಂಟೆಡ್ ಡ್ಯಾಂನಲ್ಲಿ ಸೋಮವಾರ ಗಂಗಾಪೂಜೆ ನೆರವೇರಿಸಿ ಬಳಿಕ ನೇತ್ರಾವತಿ ನದಿಗೆ ಭಾಗಿನ ಅರ್ಪಿಸಿ ಮಾತನಾಡಿದರು. ಕಳೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಸದಸ್ಯರು ಪ್ರತಿಭಟನೆಯನ್ನು ಮಾಡಿದ್ದು ತಕ್ಷಣ ನಾಲ್ಕು ತಂಡವನ್ನು ಮಾಡಿ ಕಾರ್ಯಚರಣೆ ನಡೆಸಿ ಅನಧಿಕೃತ ನಳ್ಳಿ ನೀರಿನ ಸಂಪರ್ಕವನ್ನು ಪತ್ತೆ ಮಾಡಿ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ಕೋಟ್ಯಂತರ ರೂ. ವೆಚ್ಚದಲ್ಲಿ ಡ್ಯಾಂ ಕಟ್ಟಿ, ಜನರಿಂದ ಶುಲ್ಕ ಪಡೆದು ಕುಡಿಯುವ ನೀರನ್ನು ಮಂಗಳೂರಿನ ಜನತೆಗೆ ಪೂರೈಸಲಾಗುತ್ತಿದೆ. ಆದರೆ ಕೆಲವೊಂದು ಗ್ರಾಮೀಣ ಭಾಗದಲ್ಲಿ ಮುಖ್ಯ ಪೈಪ್ ನಿಂದ ಅನಧಿಕೃತ ಸಂಪರ್ಕ ಪಡೆದು ನೀರು ಪಡೆಯುತ್ತಿರುವುದನ್ನು ಗಮನಿಸಿದ್ದು ೭೦ ಕ್ಕಿಂತಲೂ ಅಧಿಕ ಅಕ್ರಮ ಸಂಪರ್ಕವನ್ನು ಕಡಿತ ಮಾಡಲಾಗಿದೆ. ಈ ಬಗ್ಗೆ ಸಂಬಂದಫಟ್ಟ ಗ್ರಾ. ಪಂ. ಅಧ್ಯಕ್ಷರು, ಪಿಡಿಓ, ಹಾಗೂ ಜಿ.ಪಂ. ಸಿಓ ಗಮನ ಹರಿಸಿ ಅಕ್ರಮ ಸಂಪರ್ಕ ನೀರು ಬಳಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿಕೊಂಡರು.
ಕುಡ್ಸೆಂಪ್ ಮೂಲಕ ಗ್ರಾ.ಪಂ.ಗಳಿಗೆ ನೀರು ಪೂರೈಸಲು ೧೦ ಎಂಜಿಡಿಯ ಹೊಸ ಪ್ಲಾಂಟ್ ನಿರ್ಮಿಸಿದ್ದು ಶೀಘ್ರದಲ್ಲಿ ಲೋಕಾರ್ಪಣೆ ಮಾಡಿ ಮನಪಾದ ಮೂಲಕ ಗ್ರಾ.ಪಂ. ಗಳಿಗೆ ಉಚಿತವಾಗಿ ನೀರು ನೀಡಲಿದ್ದು ಗ್ರಾ.ಪಂ.ಗಳು ಸಹಕಾರ ನೀಡುವಂತೆ ಕೋರಿದರು,
ಮನಾಪ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಗಳ ಕಾಲ ನೀರು ಕೊಡುವ ಉದ್ದೇಶದಿಂದ ಜಲಸಿರಿ ಯೋಜನೆಯಡಿ ೫೮೭ ಕೋಟಿಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು, ಅದರ ಜೊತೆಗೆ ೨೦೪ ಕೋಟಿ ರೂಪಾಯಿ ಹಣವನ್ನು ನಿರ್ವಹಣೆಗಾಗಿ ಮೀಸಲಿಡಲಾಗಿದೆ. ಅದರಲ್ಲಿ ೧೯ ಓವರ್ ಹೆಡ್ ಟ್ಯಾಂಕ್ ಆಗಿದೆ, ೬ ಗ್ರೌಂಡ್ ಲೆವೆಲ್ ಟ್ಯಾಂಕ್ ನಿರ್ಮಾಣವಾಗಿದೆ, ಒಟ್ಟು ೧೨೮೮ ಕಿ.ಮೀ. ದೂರ ಪೈಪ್ ಲೈನ್ ಹಾಕುವ ಕಾರ್ಯ ನಡೆಯುತ್ತಿದೆ, ಅದರಲ್ಲಿ ೫೪.೨೪ ಕಿ.ಮಿ. ಶುದ್ದ ನೀರು ಟ್ರೀಟ್ಮೆಂಟ್ಚ ಪೈಪನ್ನು ಅಳವಡಿಸುವ ಕಾರ್ಯ, ೯೬ ಸಂಪರ್ಕಗಳಿಗೆ ಹೊಸ ಮೀಟರ್ ಅಳವಡಿಸುವ ಕಾರ್ಯ ಬಾಕಿ ಇದ್ದು ಈ ಯೋಜನೆ ಪೂರ್ಣ ಗೊಂಡರೂ ದಿನದ ೨೪ ಗಂಟೆಗಳ ಕಾಲ ನೀರು ಕೊಡಲು ಸಾಧ್ಯವಿಲ್ಲ ಎಂದು ಕೌನ್ಸಿಲ್ ನಲ್ಲಿ ವಿರೋಧ ವ್ಯಕ್ತಪಡಿಸಿರುವ ಕಾರಣ ಜಲಸಿರಿ ಯೋಜನೆಯಡಿ ಉಳಿಕೆಯದ ಹಣ ಹಾಗೂ ಮನಪಾದ ಸ್ವಂತ ಅನುದಾನದಿಂದ ಅಡ್ಯಾರ್ – ಹರೆಕಳ ಡ್ಯಾಂ ನಿಂದ ೧೨೮ ಕೋಟಿ ರೂಪಾಯ ಹೊಸ ಯೋಜನೆಗೆ ಶೀಘ್ರದಲ್ಲಿಯೇ ಶಿಲಾನ್ಯಾಸ ನೆರವೇರಲಿದೆ ಎಂದರು. ಈ ಡ್ಯಾಂನಲ್ಲಿ ೦.೬ ಟಿಎಂಸಿ ನೀರು ಶೇಖರಣೆಯಿದ್ದು ಅಡ್ಯಾರ್ ನಿಂದ ಪಣಂಬೂರು ವರೆಗೆ ಹೊಸದಾಗಿ ಪೈಪ್ ಲೈನ್ ಮಾಡಲು ೬೮ ಕೋಟಿ ರೂಪಾಯಿ ಬೇಕಾಗಿದ್ದು ಡಿಪಿಆರ್ ಮಾಡಿ ಸರಕಾರಕ್ಕೆ ಸಲ್ಲಿಸಲಾಗಿದೆ. ಎಂದರು. ಡಿಸೆಂಬರ್ ವರೆಗೆ ಅಕಾಲಿಕ ಮಳೆಯಿಂದಾಗಿ ನದಿಯಲ್ಲಿ ಸಾಕಷ್ಟು ನೀರು ಸಂಗ್ರಹಣೆಯಿದೆ. ಜನರಿಗೆ ನೀರು ಕೊಡುವ ಜವಾಬ್ದಾರಿಯನ್ನು ಮನಪಾ ನಿಭಾಯಿಸಲಿದೆ ಎಂದರು.
ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ ರಾಜ್ಯದ ಹೆಚ್ಚಿನ ನಗರದಲ್ಲಿ ನೀರಿನ ಸಮಸ್ಯೆ ಇರುತ್ತದೆ. ಆದರೆ ನೇತ್ರಾವರಿಯ ಆಶೀರ್ವಾದದಿಂದ ಮಂಗಳೂರಿಗೆ ನೀರಿನ ಕೊರತೆ ಆಗಿಲ್ಲ ಎಂದು ತಿಳಿಸಿದರು. ನದಿಯನ್ನು ಸಂರಕ್ಷಿಸ ಬೇಕು. ಅನಗತ್ಯವಾಗಿ ನೀರು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಿ ಸಂಪರ್ಕ ಕಡಿತಗೊಳಿಸರುವ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ಮನಾಪ ಆಯುಕ್ತ ಆನಂದ ಸಿ.ಎಲ್. ಮಾತನಾಡಿದರು.
ಉಪ ಮಹಾ ಆಯುಕ್ತೆ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶಶಿಧರ ಹೆಗ್ಡೆ ದಿವಾಕರ್ ಪಾಂಡೇಶ್ವರ, ಭಾಸ್ಕರ ಮೊಯಿಲಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್ ಎಸ್, ಲೋಹಿತ್ ಅಮೀನ್, ಗಣೇಶ್, ಜಯಾನಂದ ಅಂಚನ್, ತುಂಬೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಕೇಶವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಲಿಕೆ ಸದಸ್ಯರು, ಅಧಿಕಾರಿ ವರ್ಗದವರು ಭಾಗವಹಿಸಿದ್ದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.