ಬಂಟ್ವಾಳ: ಅಧಿಕಾರಿ ವರ್ಗದವರ ಸಹಕಾರ, ಶ್ರಮ, ಇದ್ದಾಗ ಧಾರ್ಮಿಕ ಕೇಂದ್ರಗಳು ಪವಿತ್ರ ಹಾಗೂ ಸೌಹಾರ್ದತೆಯ ತಾಣಗಳಾಗುತ್ತವೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 13ರಿಂದ ಫೆ. 23ರವರೆಗೆ ನಡೆಯಲಿರುವ ಪುನಃ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಧ್ವಜಸ್ತಂಭ ಪ್ರತಿಷ್ಠೆ ಹಾಗೂ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ತಾಲೂಕಿನ ಅಧಿಕಾರಿಗಳ ಸಭೆ ನಡೆಸಿ ಮಾರ್ಗದರ್ಶನ ಮಾಡಿದರು.
ಬ್ರಹ್ಮಕಲಶೋತ್ಸವದ ಸಂದರ್ಭ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಸ್ವಚ್ಛತೆ, ಬಂದೋಬಸ್ತ್ ವಿಚಾರವಾಗಿ ಅಧಿಕಾರಿಗಳು ತಮ್ಮ ಇಲಾಖೆಯ ಮೂಲಕ ಸಹಕಾರ ನೀಡಿದಾಗ ಅದು ಯಶಸ್ವಿಯಾಗಲು ಸಾಧ್ಯವಿದೆ ಎಂದರು. ಅಧಿಕಾರಿಗಳ ಸಹಕಾರಕ್ಕಾಗಿ ಸಮಿತಿಯ ಒರ್ವ ಪದಾಧಿಕಾರಿಯನ್ನು ನೀಡಬೇಕು ಎಂದು ತಿಳಿಸಿದ ಖಾದರ್ ಬ್ರಹ್ಮಕಲಶೋತ್ಸವದ 10 ದಿನಗಳಲ್ಲೂ ಪವರ್ ಕಟ್ ಆಗದಂತೆ ಎಚ್ಚರ ವಹಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸುವುದರಿಂದ ಸ್ವಚ್ಛತೆಯತ್ತ ಗಮನ ಹರಿಸಬೇಕು ಸ್ಥಳೀಯ ಪಂಚಾಯತಿ ಜೊತೆಗೆ ಪುರಸಭೆಯ ಸಹಕಾರ ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸ ಬೇಕು, ಸ್ಥಳದಲ್ಲಿಯೇ ೧೦೮ ಅಂಬ್ಯಲೆನ್ಸ್ ವ್ಯವಸ್ಥೆ ಒದಗಿಸುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ತುಂಬೆ ದೇವಸ್ಥಾನದ ಬಳಿ ಮಂಗಳೂರು ಕಡೆಯಿಂದ ಬರುವ ವಹನಗಳು ತಿರುವು ಪಡೆಯಲು ಹಾಗೂ ದೇವಸ್ಥಾನಕ್ಕೆ ಬಂದ ವಾಹನಗಳು ಬಿ.ಸಿ. ರೋಡು ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಅಡ್ಡಿಯಾಗುತ್ತಿದ್ದು ತಾತ್ಕಲಿಕವಾಗಿ ಡಿವೈಡರ್ ತುಂಡರಿಸಿ ವಾಹನಗಳು ಸರಾಗವಾಗಿ ಬರಲು ಅವಕಾಶ ಮಾಡಿಕೊಡುವಂತೆ ಎನ್ಎಚ್ಎಐ ಅಧಿಕಾರಿಗೆ ಸೂಚಿಸಿದರು.
ಡಿವೈಡರ್ ಮಧ್ಯೆ ಗಿಡ ನೆಡುವ ಸಲುವಾಗಿ ಅಗೆದ ಹೊಂಡಕ್ಕೆ ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ ಸ್ಥಳೀಯರು ಸಭಾಧ್ಯಕ್ಷರ ಗಮನಕ್ಕ ತಂದರು.
ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಚತುಷ್ಪಥ ಹೆದ್ದಾರಿಯನ್ನು ದ್ವಿಪಥ ಹೆದ್ದಾರಿಯಾಗಿ ಬದಲಿಸಿ ಒಂದು ರಸ್ತೆಯಲ್ಲಿ ದೇವಸ್ಥಾನಕ್ಕೆ ಬರುವ ವಾಹನಗಳು ಹಾಗೂ ಜನರಿಗೆ ಮೀಸಲಿಡುವಂತೆ ಸಮಿತಿಯ ಪ್ರಮುಖರು ಆಗ್ರಹಿಸಿದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯವರಿಗೆ ಸೂಚಿಸಿದ ಖಾದರ್ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಪಾರ್ಕಿಂಗ್ ಹಾಗೂ ಬಂದೋಬಸ್ತ್ ವ್ಯವಸ್ಥೆಯನ್ನು ಒದಗಿಸುವಂತೆ ಪೋಲೀಸ್ ಇನ್ಸ್ಪೆಕ್ಟರ್ ಶಿವಪ್ರಸಾದ್ ಅವರಿಗೆ ಸೂಚಿಸಿದರು.
ದೇವಸ್ಥಾನದ ಬಳಿ ಕೆಎಸ್ಆರ್ಟಿಸಿ ಬಸ್ಸು ನಿಲುಗಡೆ ಮಾಡಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಶ್ರೀಶ ಭಟ್ ಅವರಿಗೆ ಸೂಚಿಸಿದರು. ಈ ಸಂಬಂಧ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಖಾದರ್ ದೂರವಾಣಿಯ ಮೂಲಕ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಪೂರಕ ಮಾಹಿತಿ ನೀಡಿದರು. ಪ್ರಮುಖರಾದ ಜಗನ್ನಾಥ ಶೆಟ್ಟಿ ತುಂಬೆ ಗುತ್ತು, ಅರುಣ್ ಆಳ್ವ ತುಂಬೆ ಗುತ್ತು,
ಜೀವನ್ ಆಳ್ವ ತುಂಬೆಗುತ್ತು, ಉಮೇಶ್ ಸುವರ್ಣ ತುಂಬೆ, ತಹಶೀಲ್ದಾರ್ ಅರ್ಚನಾ ಭಟ್, ರಾಮಚಂದ್ರ ಸುವರ್ಣ, ಗೋಪಾಲಕೃಷ್ಣ, ಗಣೇಶ್ ಸಾಲ್ಯಾನ್, ಪ್ರವೀಣ್ ಬಿ. ತುಂಬೆ, ಲೋಲಾಕ್ಷ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀಶೈಲಾ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಅಗ್ನಿಶಾಮಕ, ಪೊಲೀಸ್, ಆರೋಗ್ಯ, ಕಂದಾಯ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಉಮೇಶ್ ರೆಂಜೋಡಿ ಕಾರ್ಯಕ್ರಮ ನಿರೂಪಿಸಿದರು.