ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯ ನಂದನಹಿತ್ತಲು
ಶ್ರೀ ವೈದ್ಯನಾಥ, ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ಧ್ವಜಸ್ತಂಭ ತರುವ ಬಗ್ಗೆ ಹಾಗೂ ಧ್ವಜಸ್ತಂಭವನ್ನು ತೈಲಾಧಿವಾಸ ಮಾಡುವ ಬಗ್ಗೆ ಪೂರ್ವಭಾವಿ ಸಮಾಲೋಚನ ಸಭೆ ದೈವಸ್ಥಾನದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭ ಪೊಳಲಿ ಗಿರಿಪ್ರಕಾಶ್ ತಂತ್ರಿಯವರು ಮಾರ್ಗದರ್ಶನ ಮಾಡಿದರು. ಫೆಬ್ರವರಿ 4 ರಂದು 12.44 ರ ಒಳಗಾಗಿ ವೃಷಭ ಲಗ್ನ ಸುಮುಹೂರ್ತದಲ್ಲಿ ವೈಭವದ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ಕೊಡಿಮರ ತರುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಕೊಡಿಮರ ತರುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ರಾಮದಾಸ್ ಬಂಟ್ವಾಳ ಮಾತನಾಡಿ ಇದು ಗ್ರಾಮಸ್ಥರಿಗೆ ಸಿಕ್ಕ ಪೂರ್ವ ಜನ್ಮದ ಸುಕೃತ. ಈ ಅವಕಾಶವನ್ನು ಬಳಸಿಕೊಂಡು ಶುದ್ದಾಚಾರದಲ್ಲಿದ್ದುಕೊಂಡು ಗ್ರಾಮದ ಪ್ರತಿಯೊಬ್ಬರು ಕೈ ಸೇರಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಬಾಳಿಗ ಮನೆತನದ ಸುಧೀರ್ ಬಾಳಿಗ ಕೊಡಿಮರಕ್ಕೆ ಬೆಳ್ಳಿಯ ಗರುಡ ನೀಡುವುದಾಗಿ ಘೋಷಿಸಿದರು. ಅವಿನಾಶ್ ಕಾಮತ್, ವಿವಿಧ ಮನೆತನದ ಸಂಜೀವ ಪೂಜಾರಿ ಪೆಲತ್ತಿಮಾರು, ವಿಶ್ವನಾಥ ಪೂಜಾರಿ ಪೊನ್ನಂಗಿಲ ಗುತ್ತು ಲೋಕೇಶ್ ಬಂಗೇರ ಗಾಣದಪಡ್ಪು ಪ್ರಮುಖರಾದ ಪ್ರವೀಣ್ ಶೆಣೈ, ಜಗನ್ನಾಥ, ಭುವನೇಶ್ ಶೆಟ್ಟಿ, ಜಯ ಸುವರ್ಣ, ಬಾಬು ಶೆಟ್ಟಿ, ಪುರಸಭೆ ಸದಸ್ಯೆ ಶಶಿಕಲಾ , ಮರದ ಶಿಲ್ಪಿ ಪ್ರವೀಣ್ ಉಪಸ್ಥಿತರಿದ್ದರು.
ಮಹಾಬಲ ಬಂಗೇರ ಸ್ವಾಗತಿಸಿದರು, ಲೋಕೇಶ್ ಬಂಗೇರ ಗಾಣದಪಡ್ಪು ವಂದಿಸಿದರು..