ಬಂಟ್ವಾಳ: ನೇತ್ರಾವತಿ ನದಿ ತೀರದ ರಮಣೀಯ ಪರಿಸರದಲ್ಲಿ ಪಶ್ಚಿಮಾಭಿಕವಾಗಿ ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಶ್ರೀಶರಭೇಶ್ವರ ದೇವಸ್ಥಾನದಲ್ಲಿ ಸಪರಿವಾರ ಶ್ರೀಶರಭೇಶ್ವರ ದೇವರ ಪುನರ್ ಪ್ರತಿಷ್ಠಾಷ್ಠಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕವು ಜ.19 ರಿಂದ 25ರವರೆಗೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಳದ ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ಮಾಥ ಶೆಟ್ಟಿ ಬದಿಗುಡ್ಡೆ ಹೇಳಿದರು.
ಬುಧವಾರ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರ ವರ್ಕಾಡಿ ಅವರ ಮಾರ್ಗದರ್ಶನದಲ್ಲಿ ನೆರವೇರಲಿದೆ ಎಂದರು. ಸುಮಾರು 7 ಕೋ.ರೂ.ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಈ ದೇವಾಲಯಕ್ಕೆ ಸಂಸದ ನಳಿನ್ಕುಮಾರ್ ಕಟೀಲ್ ಅವರು ಧ್ವಜ ಸ್ತಂಭವನ್ನು ಹರಕೆ ರೂಪದಲ್ಲಿ ಸಮರ್ಪಿಸಿದ್ದಾರೆ. ಶಾಸಕ ರಾಜೇಶ್ ನಾಕ್ ಅವರು ತಮ್ಮ ಶಾಸಕತ್ವದ ನಿಧಿಯಡಿ 2 ಕೋ.ರೂ.ವೆಚ್ಚದಲ್ಲಿ ರಥಬೀದಿ ಸುತ್ತಲು ಕಾಂಕ್ರೀಟಿಕರಣಗೊಳಿಸುವ ಕಾರ್ಯ ನಡೆದಿದೆ ಎಂದರು.
7 ದಿನಗಳ ಬ್ರಹ್ಮಕಲಶೋತ್ಸವ ಸಂಭ್ರಮದ ಪ್ರಯುಕ್ತ ಪ್ರತಿದಿನ ಧಾರ್ಮಿಕ ಸಭಾ ಕಾರ್ಯ ಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.
ಜನಪ್ರತಿನಿಧಿಗಳು, ರಾಜ್ಯದ ಸಚಿವರು, ವಿವಿಧ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು, ರಾಜಕೀಯ ನೇತಾರರು, ಉದ್ಯಮಿಗಳು ಭಾಗವಹಿಸಲಿದ್ದಾರೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದರು.
ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ಹಲವಾರು ಮಂದಿ ವಿವಿಧ ಕೊಡುಗೆಗಳನ್ನು ನೀಡಿದ್ದಾರೆ. ಸ್ಥಳೀಯ ಯುವಕ ಮಂಡಲ ಸದಸ್ಯರು ನಗರಭಜನೆಯ ಮೂಲಕ ಸಂಗ್ರಹಿಸಿದ ೪೦ ಲಕ್ಷ ರೂ.ವನ್ನು ದೇಣಿಗೆಯಾಗಿ ನೀಡಿದ್ದಾರೆ. ಮಂಗಳೂರಿನಲ್ಲಿ ವಾಸ್ತವ್ಯವಿರುವ ಇಲ್ಲಿನ ಭಕ್ತರೋರ್ವರು ದೇವಾಲಯ ಸುದ್ದಿ ಕೇಳಿ ಹಂತಹಂತವಾಗಿ ಸುಮಾರು 21 ಲಕ್ಷ ರೂ.ದೇಣಿಗೆ ನೀಡಿದ್ದಾರೆ. ಸರಕಾರದಿಂದಲು 30 ಲ.ರೂ.ಅನುದಾನ ಸಿಗುವ ಭರವಸೆ ಇದೆ ಎಂದು ಜಗನ್ನಾಥ ಚೌಟ ವಿವರಿಸಿದರು.
ನೇತ್ರಾವತಿ ನದಿಯ ಇನ್ನೊಂದು ಭಾಗದಲ್ಲಿರುವ ಸುಮಾರು 30 ಗ್ರಾಮದ ಗ್ರಾಮಸ್ಥರಿಗೆ ಬ್ರಹ್ಮಕಲಶೋತ್ಸವದ ಪ್ರತಿದಿನ ಭಾಗವಹಿಸಲು ಅನುಕೂಲವಾಗುವಂತೆ ನದಿ ದಾಟಲು ಯಾಂತ್ರೀಕೃತ ದೋಣಿಯ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಾಲಯದ ಹೊರಭಾಗದಲ್ಲಿ ಸಣ್ಣಪುಟ್ಟ ಕೆಲಸಗಳ ಹೊರತುಪಡಿಸಿ ಉಳಿದಂತೆ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ಜ.22 ರಂದು ಶ್ರೀ ಶರಭೇಶ್ವರ, ಗಣಪತಿ, ಮಹಿಷಮರ್ಧಿನಿ, ವೀರಾಂಜನೇಯ ದೇವರ ಹಾಗೂ ಧ್ವಜ ಪ್ರತಿಷ್ಠೆ ನೆರವೇರಲಿದೆ ಎಂದರು. 24 ರಂದು ನಾಗ, ಇಷ್ಠದೇವತಾ, ಪಂಜುರ್ಲಿ ದೈವಗಳ ಪ್ರತಿಷ್ಠೆನಡೆಯಲಿದ್ದು,೨೫ ರಂದು ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.
ಜ.22 ರಂದು ಕಾಕತಾಳೀಯ ಎಂಬಂತೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಒಂದೇ ಸಮಯಕ್ಕೆ ನಡೆಯುವ ಶ್ರೀರಾಮನ ಪ್ರಾಣಪ್ರತಿಷ್ಠೆಯ ನೇರಪ್ರಸಾರವನ್ನು ಭಕ್ತಾದಿಗಳಿಗೆ ವೀಕ್ಷಿಸಲು ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಕೂಡ ಶರಭೇಶ್ವರ ದೇವಳದ ಅವರಣದಲ್ಲಿ ಕಲ್ಪಿಸಲಾಗಿದೆ ಎಂದು ಬ್ರಹ್ಮಕಲಶ ಸಮಿತಿಯ ಪ್ರ.ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ತಿಳಿಸಿದರು.
ಜ.19ರಂದು ಹೊರೆಕಾಣಿಕೆ:
ಜ.19 ರಂದು ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದ ಪಕ್ಕದಮೈದಾನದಿಂದ ಶ್ರೀಕ್ಷೇತ್ರಕ್ಕೆ ವೈವಿಧ್ಯಮಯವಾದ ಹಸಿರುಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ. ಶ್ರೀಧಾಮ ಮಾಣಿಲದ ಶ್ರೀಮೋಹನದಾಸ್ ಸ್ವಾಮೀಜಿ,ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ರಮಾನಾಥ ರೈ, ಆಳ್ವಾಸ್ ಶಿಕ್ಷಣಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಮೊದಲಾದ ಗಣ್ಯರು ಈ ಸಂದರ್ಭ ಉಪಸ್ಥಿತರಿರುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಅರ್ಚಕರಾದ ಶಂಕರನಾರಾಯಣ ಹೊಳ್ಳ, ವಿವಿಧ ಸಮಿತಿ ಪದಾಧಿಕಾರಿಗಳಾದ ರಾಧಕೃಷ್ಣ ರೈ ಕೊಟ್ಟುಂಜ, ಅರುಣ್ ಐತಾಳ್, ಮೊಕ್ತೇಸರರಾದ ಉಮೇಶ್ ಆಳ್ವ ಕೊಟ್ಟುಂಜ, ವಿಠಲ ಎಂ.ಆರುಮುಡಿ, ದಯಾನಂದ ಪೂಜಾರಿ ಕೋಡಿ ಮೊದಲಾದವರಿದ್ದರು.
—