ಬಂಟ್ವಾಳ: ನದಿ ನೀರಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ. ಮೃತ ಬಾಲಕನನ್ನು ಕೂಡಿಬೈಲು ನಿವಾಸಿ ಪುಟ್ಟಣ್ಣ ನಾಯ್ಕ್ ಎಂಬವರ ಮಗ ಪ್ರಜ್ವಲ್ ನಾಯ್ಕ್ (13) ಎಂದು ಗುರುತಿಸಲಾಗಿದೆ.
ಕೂಡಿಬೈಲು ಜಾತ್ರೆಯ ನಿಮಿತ್ತ ಪುಟ್ಟಣ್ಣ ನಾಯ್ಕ್ ಅವರ ಮನೆಗೆ ನೆಂಟರಿಷ್ಟರು ಬಂದಿದ್ದು ಕೆಲವು ಸ್ನೇಹಿತರೊಂದಿಗೆ ಮನೆ ಸಮೀಪದ ನೇತ್ರಾವತಿ ನದಿ ಬಳಿಗೆ ತೆರಳಿದ್ದರು ಎನ್ನಲಾಗಿದೆ.
ಈ ಸಂದರ್ಭ ಪ್ರಜ್ವಲ್ ಕೂಡ ಅವರೊಂದಿಗೆ ತೆರಳಿದ್ದು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುಟ್ಟಣ್ಣ ನಾಯ್ಕ್ ಅವರಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಬಂಟ್ವಾಳದ ಎಸ್ವಿಎಸ್ ದೇವಳ ಶಾಲೆಯಲ್ಲಿ ೮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಊರಿನ ಜಾತ್ರೆಯ ಪ್ರಯುಕ್ತ ಬುಧವಾರ ಶಾಲೆಗೆ ಬಂದಿರಲಿಲ್ಲ. ಆಕಸ್ಮಿಕ ದುರ್ಘಟನೆಯಿಂದ ಮನೆಯಲ್ಲಿ ದುಃಖದ ವಾತವರಣ ಕಂಡು ಬಂದಿದೆ. ಮೃತದೇಹವನ್ನು ನದಿಯಿಂದ ಮೇಲೆತ್ತಲಾಗಿದ್ದು ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.