ಬಂಟ್ವಾಳ: ಅಯೋಧ್ಯೆಯ ನೂತನ ಮಂದಿರದಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಇಡೀ ದೇಶವೇ ಸಂಭ್ರಮದಲ್ಲಿದ್ದರೆ,
ಅಯೋಧ್ಯೆ ಕರಸೇವೆಯಲ್ಲಿ 2 ಬಾರಿ ಪಾಲ್ಗೊಂಡರೂ, ಪ್ರಸ್ತುತ ಅಯೋಧ್ಯೆ ನೂತನ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಸಾಧ್ಯವಾಗದ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರು ಇದರ ನೆನಪಿಗಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಮಧ್ಯದಲ್ಲಿ ಜ 21ರ ರಾತ್ರಿ 7ರ ಬಳಿಕ ಶ್ರೀ ಸತ್ಯನಾರಾಯಣ ಪೂಜಾ ವಿಧಿಯನ್ನು ನಡೆಸಲಿದ್ದಾರೆ.
ನದಿನೀರಿನ ಮಧ್ಯೆ ತೆಪ್ಪದ ಮಾದರಿಯನ್ನು ರಚಿಸಿ ವಿದ್ಯುತ್ ಮತ್ತು ಹಣತೆ ಬೆಳಕಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ಪ್ರಭು ಅವರು ಇದಕ್ಕೆ ಬೇಕಾದ ಸಕಲ ಸಿದ್ದತೆಗಳು ನೇತ್ರಾವತಿಯಲ್ಲಿ ಭರದಿಂದ ಸಾಗುತ್ತಿದೆ.
ಇಂತಹ ವಿಶೇಷ ಕಾರ್ಯಕ್ರಮದ ರೂವಾರಿಯಾಗಿರುವ ಗೋವಿಂದ ಪ್ರಭು ಅವರು ಪೂಜೆ ನಡೆಯುವ ಪಕ್ಕವೇ ನದಿಯಲ್ಲಿ ಭಕ್ತರ ಗಮನಸೆಳೆಯುವ ನಿಟ್ಟಿನಲ್ಲಿ ಶ್ರೀರಾಮನ ಹಾಗೂ ಅಂಜನೇಯನ ವಿಗ್ರಹಗಳನ್ನು ರಚಿಸಲಿದ್ದಾರೆ. ಪೂಜೆಯ ಬಳಿಕ ಎಲ್ಲರೂ ನದಿ ಮಧ್ಯೆ ಪೂಜೆ ನಡೆಯುವ ಜಾಗಕ್ಕೆ ಬಂದು ಪ್ರಸಾದ ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.ರಾತ್ರಿ 7 ಗಂಟೆಗೆ ಆರಂಭವಾಗಲಿರುವ ಶ್ರೀಸತ್ಯನಾರಾಯಣ ಪೂಜಾಕೈಕಂರ್ಯ 9 ಗಂಟೆಯವರೆಗೆ ನಡೆಯಲಿದ್ದು,ಮಹಾಪೂಜೆಯ ಬಳಿಕ ಎಲ್ಲ ರಿಗೂ ಉಪಹಾರದ ವ್ಯವಸ್ಥೆ ಕೂಡ ಇರಲಿದೆ.ಇದೇ ಮೊದಲಬಾರಿಗೆ ನದಿಯ ಮಧ್ಯದಲ್ಲಿ ವೇದಿಕೆ ನಿರ್ಮಿಸಿ ಶ್ರೀಸತ್ಯನಾರಾಯಣ ಪೂಜೆ ನಡೆಯುತ್ತಿದೆ.
ಅಂದು ಏಕಾದಶಿಯಾಗಿರುವುದರಿಂದ ಅನ್ನ ಸಂತರ್ಪಣೆ ಮಾಡಲಾಗುವುದಿಲ್ಲ ಬದಲಿಗೆ ವಿವಿಧ ಬಗೆಯ ಸ್ವಾದೀಷ್ಟವಾದ ಫಲಾಹಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಮಾರು 2 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಅವರಿಗಾಗಿ ದೇವಸ್ಥಾನ ಆವರಣದಲ್ಲಿ ನದಿ ಕಿನಾರೆಯ ಮೆಟ್ಟಿಲುಗಳಲ್ಲಿ ಕುಳಿತುಕೊಂಡು ಪೂಜೆಯನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಕಾರ್ಯಕ್ರಮದ ರೂವಾರಿ ಗೋವಿಂದ ಪ್ರಭು ತಿಳಿಸಿದ್ದಾರೆ.
ಅಯೋಧ್ಯೆ ಕರೆ ಸೇವೆಯಲ್ಲಿ ನಾನು 2 ಬಾರಿ ಭಾಗವಹಿಸಿದ್ದೆ. ಈಗ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಅವಕಾಶ ಇಲ್ಲದೇ ಇರುವುದರಿಂದ ಸರೆಯೂ ನದಿಯಷ್ಟೇ ಪವಿತ್ರವಾಗಿರುವ ನೇತ್ರಾವತಿ ನದಿಯಲ್ಲಿ ಸತ್ಯನಾರಾಯಣ ಪೂಜೆಗೆ ಸಿದ್ಧತೆ ನಡೆಸಿದ್ದೇನೆ ಎಂದು ಪ್ರಭು ತಿಳಿಸಿದ್ದಾರೆ.
ಕನಸು ನನಸಾಗಿದೆ: ಗೋವಿಂದ ಪ್ರಭು
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಕನಸು ನಮ್ಮ ಜೀವಿತಕಾಲದಲ್ಲಿಯೇ ನನಸಾಗಿರುವುದು ಅತ್ಯಂತ ಸಂತಸ ತಂದಿದೆ.
ಎರಡು ಬಾರಿ ಅಯೋಧ್ಯೆಯ ಕರಸೇವೆಯಲ್ಲಿ ನಾನು ಪಾಲ್ಗೊಂಡಿದ್ದು, ನನ್ನೊಂದಿಗೆ ಬಂಟ್ವಾಳ ಸುತ್ತಮತ್ತಲಿನ ಅನೇಕ ಹಿರಿಯರು ಭಾಗವಹಿಸಿದ್ದರು.
ಕರೆಸೇವೆಯಲ್ಲಿ ಭಾಗಿಯಾದ ಸನ್ನಿವೇಶ ರೋಚಕ ಅನುಭವ ಪ್ರಸ್ತುತ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಟೆ ಕಾರ್ಯಕ್ರಮದಲ್ಲಿ ನಮಗೆ ಭಾಗಿಯಾಗಿಲು ಸಾಧ್ಯವಾಗುತ್ತಿಲ್ಲ,
ನೂರಾರು ವರ್ಷದ ಕನಸು ಈಡೇರಿದ ಸಂತಸದ ಕ್ಷಣದಲ್ಲಿ ಶ್ರೀದೇವರಿಗೆ ಪೂಜೆ ನಡೆಸಬೇಕೆಂದು ಪವಿತ್ರ ನೇತ್ರಾವತಿ ನದಿ ಮಧ್ಯೆ ವಿಶಿಷ್ಠ ರೀತಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದೆನೆ ಎಂದು ಅವರು ತಿಳಿಸಿದ್ದಾರೆ