ಬಂಟ್ವಾಳ: ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದಡ್ಡಲ ಕಾಡು ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ ಒಂದೊಂದು ಮನೆಯ ಒಂದೊಂದು ಕಥೆ ಕಿರುಚಿತ್ರ ಜ.14 ರಂದು ಮಕರ ಸಂಕ್ರಾಮಣದ ಶುಭ ಸಂದರ್ಭದಲ್ಲಿ ಯೂಟ್ಯೂಬ್ ಮೂಲಕ ಬಿಡುಗಡೆಗೊಳ್ಳಲಿದೆ.
ದಡ್ಡಲಕಾಡು ಆಂಗ್ಲಮಾಧ್ಯಮ ಪ್ರೌಢಶಾಲೆ ಶಿಕ್ಷಣ ವ್ಯವಸ್ಥೆಯಲ್ಲಿ ವಿಶೇಷ ಚಾಪು ಮೂಡಿಸಿರುವ ಶಾಲೆ. ಇದೀಗ ಹೊಸದೊಂದು ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿ ನಿಂತಿದ್ದು, ಶಾಲೆಯ ಡ್ರಾಮಾ ವಿದ್ಯಾರ್ಥಿಗಳೊಂದಿಗೆ ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ್ ಅಂಚನ್ ನಿರ್ಮಿಸಿ, ನಿರ್ದೇಶಿಸಿರುವ ” ಒಂದೊಂದು ಮನೆಯ ಒಂದೊಂದು ಕಥೆ ” ಕಿರು ಚಿತ್ರ ನಿರ್ಮಾಣಗೊಂಡಿದೆ. ಕೇವಲ ಮೊಬೈಲ್ ಬಳಸಿ ಚಿತ್ರೀಕರಣ, ಸಂಕಲನ ಮಾಡಲಾಗಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಇದೊಂದು ದಾಖಲೆಯಾಗಿದ್ದು
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಶನಿವಾರ ಶಾಲೆಯಲ್ಲಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯ ರಮಾನಂದ , ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ್ ಅಂಚನ್ ,ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ವಿನ್ನಿ ಸಿಂಥಿಯಾ ,ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಉಪಾಧ್ಯಕ್ಷ ಬಾಲಕೃಷ್ಣ ಗೌಡ ,ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಾಮಚಂದ್ರ ಕರೆಂಕಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು .