ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಇದರ 16ನೇ ತೊಕ್ಕೊಟ್ಟು- ದೇರಳಕಟ್ಟೆ ಶಾಖೆಯು ಜ.14ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿರುವ ನಿತ್ಯಾನಂದ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಳ್ಳಲಿದೆ.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡುವರು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೂತನ ಶಾಖೆ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ವಹಿಸುವರು. ಭದ್ರತಾ ಕೊಠಡಿಯಯನ್ನು ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ ಕುಮಾರ್ ರೈ ಬೋಳಿಯಾರ್, ಸೇಫ್ ಲಾಕರನ್ನು ದೈವದ ಮೂಲ್ಯಣ್ಣ ಕೆ. ಬಾಲಕೃಷ್ಣ ಸಾಲಿಯಾನ್, ಕಂಪ್ಯೂಟರನ್ನು ಬೆಳ್ಮಾ ಗ್ರಾಮ ಪಂಚಾಯತಿ ಅಧ್ಯಕ್ಷೆ ರಜೀಯ ಉದ್ಘಾಟಿಸುವರು, ಕುಂಭೇಶ್ವರ ವಿ.ಸ.ಸಂಘ ನಿ. ಕೊಲ್ಯ ಇದರ ಅಧ್ಯಕ್ಷ ಗೋಪಾಲ ಕಣ್ವತೀರ್ಥ ಠೇವಣಿ ಪತ್ರ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್. ರಮೇಶ್, ಕೊಂಡಾಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ದೇರಳಕಟ್ಟೆಯ ಪಾನೀರು ಚರ್ಚ್ನ ಧರ್ಮಗುರು ವಂ. ರೇ| ಫಾ| ವಿಕ್ಟರ್ ಡಿಮೆಲ್ಲೊ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತೇಸರ ಚಂದ್ರಹಾಸ ಅಡ್ಯಂತಾಯ, ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ, ಉದ್ಯಮಿ ಗೋಪಾಲ ಕುತ್ತಾರು, ಕಟ್ಟಡ ಮಾಲೀಕರಾದ ವೀಣಾ , ರತ್ನ ಎಜುಕೇಷನ್ ಟ್ರಸ್ಟ್ ದೇರಳಕಟ್ಟೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಬೆಳ್ಮ ಗ್ರಾ.ಪಂ. ಸದಸ್ಯರಾದ ಇಕ್ಬಾಲ್ ಎಚ್.ಆರ್., ರಮ್ಲತ್ ಭಾಗವಹಿಸುವರು ಎಂದು ಬುಧವಾರ ಬಂಟ್ವಾಳ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಮಾಹಿತಿ ನೀಡಿದರು.
ಬಂಟ್ವಾಳ ಬೈಪಾಸ್ ಜಂಕ್ಷನಿನಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘ ತನ್ನ 15ಶಾಖೆಗಳಾದ ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬ್ಯೆಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ.ಸಿ.ರೋಡ್, ಪುಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ಧಕಟ್ಟೆ ಮತ್ತು ಉಪ್ಪಿನಂಗಡಿ ಶಾಖೆಗಳಲ್ಲಿ ಉತ್ತಮ ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿದೆ.
೨೦೨೩ರ ಮಾರ್ಚ್ ಅಂತ್ಯಕ್ಕೆ ಒಟ್ಟು ೭೫೯೭ ಸದಸ್ಯರಿದ್ದು ಪಾಲು ಬಂಡವಾಳ ರೂ. ೭.೬೪ ಕೋಟಿ, ಠೇವಣಾತಿಗಳು ರೂ. ೧೯೭.೬೯ ಕೋಟಿ, ನಿಧಿಗಳು ೧೩.೧೪ ಕೋಟಿ, ವಿನಿಯೋಗಗಳು ೬೬.೭೯ ಕೋಟಿ, ಸಾಲಗಳು ರೂ. ೧೬೨.೦೧ ಕೋಟಿ, ಇದ್ದು ವಸೂಲಾತಿ ಶೇಕಡ ೯೫.೦೬ ಆಗಿರುತ್ತದೆ. ೨೦೨೨-೨೩ನೇ ಸಾಲಿನಲ್ಲಿ ರೂ. ೮೦೮.೧೪ ಕೋಟಿ ವ್ಯವಹಾರ ನಡೆಸಿ ರೂ. ೪ ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೨೨೦.೩೪ ಕೋಟಿ ಮೀರಿ ಆಗಿದ್ದು ಆಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದಿದೆ. ಪ್ರಸ್ತುತ ಮೂರನೇ ತ್ರೈಮಾಸಿಕದ ಅಂತ್ಯಕ್ಕೆ ಸಹಕಾರಿಯಲ್ಲಿ ಒಟ್ಟು ೭೭೬೯ ಸದಸ್ಯರಿದ್ದು ಪಾಲು ಬಂಡವಾಳ ರೂ. ೭.೮೬ ಕೋಟಿ, ಠೇವಣಾತಿಗಳು ರೂ. ೨೦೭.೦೨ ಕೋಟಿ, ನಿಧಿಗಳು ೧೨.೨೯ ಕೋಟಿ, ವಿನಿಯೋಗಗಳು ೫೯.೭೬ ಕೋಟಿ, ಸಾಲಗಳು ರೂ. ೧೮೧.೯೮ ಕೋಟಿ ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೨೩೨.೧೭ ಕೋಟಿ ಆಗಿರುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನು ನಾಲ್ಕು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತಿರ್ಮಾನಿಸಿರವುದಾಗಿ ತಿಳಿಸಿದರು.
ಸಂಘದಲ್ಲಿ 62 ಖಾಯಂ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ ೪೪ ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಚಿಂತನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಆನ್ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿ ಯೋಜನೆ ಹಾಕಿಕೊಂಡಿರುತ್ತದೆ. ಸಹಕಾರಿಯ ವತಿಯಿಂದ ಉನ್ನತ ವ್ಯಾಸಂಗಕ್ಕಾಗಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಅಳವಡಿಸಲಾಗಿದೆ.
ಸಹಕಾರಿಯಲ್ಲಿ 209 ಅಮೂಲ್ಯ ಸ್ವಸಹಾಯ ಗುಂಪುಗಳಿದೆ. ಸಹಕಾರಿಯ ಸಾಮಾನ್ಯ ಕ್ಷೇಮನಿಧಿಯಿಂದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ರೂ. ೩,೦೦,೫೦೦ನ್ನು ನೀಡಲಾಗಿದೆ. ದೇವಸ್ಥಾನ, ದೈವಸ್ಥಾನ ಜೀರ್ಣೋದ್ಧಾರದ ಬಗ್ಗೆ ರೂ. ೩,೯೫,೧೫೦, ಸಪ್ತಾಹ ಮತ್ತು ಸಂಘ ಸಂಸ್ಥೆಗಳಿಗೆ ರೂ. ೭,೨೫,೦೦೦ ಸಹಾಯಧನವನ್ನು ನೀಡಲಾಗಿದೆ. ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸದಸ್ಯರ ಗಂಭೀರ ಕಾಯಿಲೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಸೌಲಭ್ಯವನ್ನು ಗ್ರಾಹಕರಿಗಾಗಿ ಅಳವಡಿಸಲಾಗಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗಿದೆ. ರೂ.10 ಸಾವಿರ ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ರೂ. ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ ವಿ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ಆಡಳಿತ ಮಂಡಳಿಯ ಸದಸ್ಯರಾದ ರಮೇಶ್ ಸಾಲ್ಯಾನ್, ಜನಾರ್ದನ ಬೊಂಡಾಲ, ಎಂ. ವಾಮನ ಟೈಲರ್, ಬಿ. ರಮೇಶ್ ಸಾಲ್ಯಾನ್, ಸುರೇಶ್ ಎನ್., ವಿ. ವಿಜಯಕುಮಾರ್, ಜಗನ್ನಿವಾಸ ಗೌಡ, ಎಂ.ಕೆ. ಗಣೇಶ ಸಮಗಾರ ಉಪಸ್ಥಿತರಿದ್ದರು.