ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಸಂಘ ಕರ್ನಾಟಕ ರಾಜ್ಯ ಶಾಖೆಯ ವತಿಯಿಂದ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೆಳನವು ಮೇ.26ರಂದು ನಗರದ ಭಾರತೀಯ ವೈದ್ಯಕೀಯ ಸಂಘದ ಎ.ವಿ.ರಾವ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಐಎಂಎ ಮಂಗಳೂರು ಅಧ್ಯಕ್ಷ ಡಾ. ಸಚ್ಚಿದಾನಂದ ರೈ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಾಡಿನ ಖ್ಯಾತ ವೈದ್ಯ ಬರಹಗಾರರು, ವಿವಿಧ ಗೋಷ್ಟಿಗಳನ್ನು ನಡೆಸಿಕೊಡುವರು. ರಾಜ್ಯದ 175 ಶಾಖೆಗಳ ಸುಮಾರು 300ಕ್ಕೂ ಮಿಕ್ಕಿ ವೈದ್ಯ ಬರಹಗಾರರು ನೋಂದಾಣಿ ಮಾಡಿ, ಚರ್ಚೆ ಚಿಂತನ ಮಂಥನಗಳಲ್ಲಿ ಭಾಗವಹಿಸಿ ಕವನ, ಲೇಖನ ಸ್ಪರ್ಧೆಗಳಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಮೇ.26ರಂದು ಬೆಳಿಗ್ಗೆ 10.15ರಿಂದ 11 ಗಂಟೆಯವರೆಗೆ ನಡೆಯುವ ಪ್ರಥಮ ಗೋಷ್ಟಿಯಲ್ಲಿ ವೈದ್ಯರು ವೈದ್ಯಕೀಯ ಸೇವೆ ಮತ್ತು ತಲ್ಲಣಗಳು ಎಂಬ ವಿಷಯದ ಬಗ್ಗೆ ಡಾ| ನಾ. ಸೋಮೇಶ್ವರ ಅಧ್ಯಕ್ಷತೆಯಲ್ಲಿ ಗೋಷ್ಟಿ ನಡೆಯಲಿದೆ. ಬೆ. 11.20 ರಿಂದ 11.35ರವರೆಗೆ ಕನ್ನಡ ಸಾಹಿತ್ಯಕ್ಕೆ ವೈದ್ಯರುಗಳ ಕೊಡುಗೆ ಎಂಬ ವಿಷಯದ ಬಗ್ಗೆ ಸಮ್ಮೇಳನಾಧ್ಯಕ್ಷ ಡಾ| ಎಸ್.ಪಿ. ಯೋಗಣ್ಣ ಗೋಷ್ಟಿ ನಡೆಸಲಿದ್ದಾರೆ ಎಂದರು.
ಬೆಳಿಗ್ಗೆ 11.35ರಿಂದ 12.20ರ ವರೆಗೆ ನಡೆಯುವ ಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಅಂದು- ಇಂದು-ಮುಂದೆ ಎಂಬ ವಿಷಯದ ಬಗ್ಗೆ ಹಿರಿಯ ವೈದ್ಯ ಬರಹಗಾರ ಡಾ| ಭಾಸ್ಕರ ಆಚಾರ್ಯ ಅಧ್ಯಕ್ಷತೆಯಲ್ಲಿ ಗೋಷ್ಟಿ ನಡೆಯಲಿದೆ. ಮಧ್ಯಾಹ್ನ 12.20 ರಿಂದ 1.05ರವರೆಗೆ ನಡೆಯುವ ಗೋಷ್ಟಿಯಲ್ಲಿ ವೈದ್ಯರು ಮತ್ತು ಪತ್ರಿಕಾ ಅಂಕಣಗಳು ಎಂಬ ವಷಯದ ಬಗ್ಗೆ ವೈದ್ಯ ಬರಹಗಾರ ಡಾ| ಶ್ರೀಧರ ಎಂ. ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯಲಿದೆ ಎಂದರು.
ಸಮ್ಮೇಳನದ ಸಂಘಟನ ಕಾರ್ಯದರ್ಶಿ ಡಾ| ಅಣ್ಣಯ್ಯ ಕುಲಾಲ್ ಮಾತನಾಡಿ ಮಧ್ಯಾಹ್ನ 2 ಗಂಟೆಯಿಂದ 2.45ರವರೆಗೆ ವೈದ್ಯಕೀಯ ವೃತ್ತಿಯಲ್ಲಿ ವಿನೋಧದ ಘಟನೆಗಳು ಎಂಬ ವಿಷಯದ ಬಗ್ಗೆ ಹಿರಿಯ ವೈದ್ಯ ಬರಹಗಾರರಾದ ಡಾ. ಜಿ.ಜಿ.ಲಕ್ಷ್ಮಣ ಪ್ರಭು ಅಧ್ಯಕ್ಷತೆಯಲ್ಲಿ ಗೋಷ್ಟಿ ನಡೆಯಲಿದೆ. ಮಧ್ಯಾಹ್ನ 2.45ರಿಂದ 3.30ರವರೆಗೆ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಸಾಹಿತ್ಯದಲ್ಲಿ ವೈದ್ಯರ ಸೇವೆ ಎಂಬ ವಿಷಯದ ಬಗ್ಗೆ ಗೋಷ್ಠಿ ನಡೆಯಲಿದೆ. 3.45 ರಿಂದ 4.30ರವರೆಗೆ ನಡೆಯುವ ಗೋಷ್ಠಿಯಲ್ಲಿ ಕನ್ನಡದಲ್ಲಿ ರೋಗ ಮಾಹಿತಿ, ಮಾರ್ಗದರ್ಶನ, ಒಪ್ಪಿಗೆ/ಅನುಮತಿ, ದಾಖಲೀಕರಣ ಒಂದು ಪ್ರಯತ್ನ ಎಂಬ ವಿಷಯದ ಬಗ್ಗೆ ಡಾ| ಮಧುಸೂದನ್ ಕೆ. ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯಲಿದೆ. ಸಂಜೆ 4.30ರಿಂದ 5 ಗಂಟೆಯವರೆಗೆ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಸಮ್ಮೇಳನದ ಸಹ ಸಂಘಟನ ಕಾರ್ಯದರ್ಶಿ ಡಾ| ಸುಧೀಂದ್ರ ರಾವ್ ಎಂ, ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ| ಜಿ.ಕೆ.ಭಟ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ವೈದ್ಯ ಬರಹಗಾರರ ಮೊದಲ ರಾಜ್ಯ ಸಮ್ಮೇಳನ
