ಬಂಟ್ವಾಳ: ಸ್ವಚ್ಚತೆ ಹಾಗೂ ಕಸ ವಿಲೇವಾರಿಯ ಬಗ್ಗೆ ಅರಿವು ಮೂಡಿಸುವ ಕಸ ಪ್ರಸಂಗ ವಿಶೇಷ ಜಾಗೃತಿ ಕಾರ್ಯಕ್ರಮ ಬಂಟ್ವಾಳ ಪುರಸಭೆ ಹಾಗೂ ಕಾರ್ಮೆಲ್ ಕಾಲೇಜು ಮೊಡಂಕಾಪು ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಮಂಗಳವಾರ ಮೊಡಂಕಾಪುವಿನ ಕಾರ್ಮೆಲ್ ಪದವಿ ಕಾಲೇಜಿನಲ್ಲಿ ನಡೆಯಿತು.
ಮಂಗಳೂರಿನ ಹಸಿರು ದಳದ ಸಂಯೋಜಕ ನಾಗರಾಜ್ ಬಜಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಮನಸ್ಥಿತಿಯನ್ನು ಮೊದಲು ಬದಲಾಯಿಸಿಕೊಂಡು ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಬೇಕು. ನಮ್ಮಿಂದ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಪತ್ರಕರ್ತ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಭ. ಡಾ. ಲತಾ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಿಜೇತ ಕುಲಾಲ್ ವೇದಿಕೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳಾದ ಜೋಸ್ವಿಟಾ ಸ್ವಾಗತಿಸಿದರು, ಇಮ್ದಾದ್ ವಂದಿಸಿದರು, ಪ್ರೇಕ್ಷಾ ಕಾರ್ಯಕ್ರಮ ನಿರೂಪಿಸಿದರು.