ಬಂಟ್ವಾಳ: ಕಳೆದ ಜೂನ್ ಅಂತ್ಯದವರೆಗೂ ಮಳೆಯಿಲ್ಲದೆ ಬರಗಾಲ ಎದುರಾಗಿ ಕಣ್ಣೆದುರೇ ತಾವು ಬೆಳೆಸಿದ ಕೃಷಿ ನಾಶವಾಗುವುತ್ತಿರುವ ಸಂಕಷ್ಟವನ್ನು ಜಿಲ್ಲೆಯ ಅನೇಕ ರೈತರು ಅನುಭವಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಸ್ಥರು ಈ ಭಾರಿ ಮಳೆ ಮುಗಿಯುತ್ತಿದ್ದಂತೆಯೇ ತಮ್ಮ ಗ್ರಾಮಗಳಲ್ಲಿ ಹರಿಯುವ ತೊರೆಗಳ ಚೆಕ್ ಡ್ಯಾಂಗಳಿಗೆ ಶ್ರಮದಾನದ ಮೂಲಕ ಒಡ್ಡುಗಳನ್ನು ನಿರ್ಮಿಸಿ ವ್ಯರ್ಥವಾಗಿ ಹರಿದು ನದಿ ಸೇರುತ್ತಿದ್ದ ನೀರನ್ನು ಸಂರಕ್ಷಿಸಿ ಜಲಕ್ರಾಂತಿ ಮಾಡಿದ್ದಾರೆ. ಇದರಿಂದಾಗಿ ಇಡೀ ಅಮ್ಟಾಡಿ ಗ್ರಾಮ ಪರಿಸರದ ತೊರೆ, ಬಾವಿ ಕೆರೆಗಳು ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿ ಜಲಸಮೃದ್ಧಗೊಂಡಿದೆ.
ಕಳೆದ ಬೇಸಿಗೆಯಲ್ಲಿನ ನೀರಿನ ಸಮಸ್ಯೆ ಅನೇಕ ಕೃಷಿಕರನ್ನು ಕಂಗೆಡಿಸಿದೆ. ಅಮ್ಟಾಡಿ ಪರಿಸರದಲ್ಲಿ ದೊಡ್ಡ ತೊರೆಗಳಿದ್ದು ಅದಕ್ಕೆ ಚೆಕ್ ಡ್ಯಾಂಗಳಿದ್ದರೂ ಸಕಾಲದಲ್ಲಿ ಹಲಗೆಯಾಕದ ಕಾರಣ ಹಾಗೂ ಒಡ್ಡು ನಿರ್ಮಿಸಿದ ಕಾರಣ ನೀರು ನದಿ ಸೇರುತ್ತಿತ್ತು. ಮೊಡಂಕಾಫು ಇನ್ಪೆಂಟ್ ಜೀಸಸ್ ಚರ್ಚ್ನ ಧರ್ಮಗರುಗಳಾದ ವಂದನೀಯ ವಲೇರಿಯನ್ ಡಿಸೋಜಾ ಅವರ ಮಾರ್ಗದರ್ಶನಂತೆ ಅಮ್ಟಾಡಿ ಗ್ರಾಮದ ತೊರೆಗಳಲ್ಲಿರುವ ಚೆಕ್ಡ್ಯಾಂಗಳಿಗೆ ಒಡ್ಡುಕಟ್ಟಿ ನೀರು ನಿಲ್ಲಿಸುವ ಯೋಜನೆ ರೂಪಿಸಲಾಯಿತು. ಇನ್ಪೆಂಟ್ ಜೀಸಸ್ ಚರ್ಚ್ನ ಸಾಮಾಜಿಕ ಅಭಿವೃದ್ಧಿ ಆಯೋಗ, ಪರಿಸರ ಆಯೋಗ, ರೈತ ಸಂಘ ಬಂಟ್ವಾಳ ವಲಯ, ಯುವ ಶಕ್ತಿ ಕಲಾವೃಂದ ಕಿನ್ನಿಬೆಟ್ಟು, ಕುಲಾಲ ಕುಂಬಾರರ ಯುವವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಕ್ರಿಸ್ಟೋಫರ್ ಎಸೋಸಿಯೇಷನ್, ಕಲಾಯಿ, ಕಿನ್ನಿಬೆಟ್ಟು, ಕಾಯರ್ಮಾರ್ನ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಒಡ್ಡು ನಿರ್ಮಿಸುವ ಕಾಯಕದಲ್ಲಿ ಶ್ರಮದಾನದಲ್ಲಿ ಸಹಕರಿಸಿದರು. ಅಮ್ಟಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯ್ ಕುಮಾರ್, ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಗ್ರಾಮಸ್ಥರ ಯೋಜನೆಗೆ ಸಹಕಾರ ನೀಡಿದರು.
ಸುಮಾರು ೫೦ ರಿಂದ ೬೦ ಮಂದಿಯ ತಂಡ ಅಮ್ಟಾಡಿ ಗ್ರಾಮದ ಕೊಳಕೆದ ಕಂಡ, ಮಂಗ್ಲಿಮಾರ್ ದೈವಸ್ಥಾನದ ಬಳಿ, ಕಿನ್ನಿಬೆಟ್ಟು, ಕಾಯರ್ಮಾರ್, ಅಜೆಕಲ ಮೊದಲಾದೆಡೆ 6 ಒಡ್ಡುಗಳನ್ನು ನಿರ್ಮಿಸಿದ ಪರಿಣಾಮ ಗ್ರಾಮದಲ್ಲಿ ನೀರು ಸಮೃದ್ದವಾಗಿದೆ. ಬಾವಿ ಕೆರೆಗಳಲ್ಲಿ ಒರತೆ ಹೆಚ್ಚಾಗಿ ನೀರಿನಿಂದ ತುಂಬಿಕೊಂಡಿದೆ. ಕೃಷಿಕರು ಯಥೇಚ್ಚವಾಗಿ ಕೃಷಿಗೆ ನೀರು ಬಳಸಲು ಈ ಯೋಜನೆ ಸಹಕಾರಿಯಾಗಿದೆ.
ಇದರಿಂದಾಗಿ ಪ್ರೇರಿತರಾದ ಅಮ್ಟಾಡಿ ಸುತ್ತಮುತ್ತಲಿನ ಗ್ರಾಮಸ್ಥರು ತೊರೆಗೆ ಒಡ್ಡು ನಿರ್ಮಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು ಒಟ್ಟು ೨೩ ಕಡೆಗಳಲ್ಲಿ ಚೆಕ್ಡ್ಯಾಂ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಈ ಕಾರ್ಯ ಜಿಲ್ಲೆಯ ಇತರ ಗ್ರಾಮಗಳಿಗೂ ಮಾದರಿಯಾಗಿದೆ.
ಕಾರ್ಮೆಲ್ ಎನ್ಎಸ್ಎಸ್ ವಿದ್ಯಾರ್ಥಿಗಳ ಸಹಕಾರ:
ಮೊಡಂಕಾಪುವಿನ ಕಾರ್ಮೆಲ್ ಕಾಲೇಜಿನ ಸುಮಾರು ೪೦ ಮಂದಿ ವಿದ್ಯಾರ್ಥಿಗಳು ೫ ದಿನ ಒಡ್ಡು ನಿರ್ಮಿಸವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಚೆಕ್ಡ್ಯಾಂನ ಮಧ್ಯೆ ಹಲಗೆಗಳನ್ನು ಜೋಡಿಸಿ ಮಣ್ಣು ತುಂಬುವ ಕಾರ್ಯದಲ್ಲಿ ಗ್ರಾಮಸ್ಥರಿಗೆ ಸಹಕರಿಸಿದ್ದಾರೆ. ಇನ್ಫೆಂಟ್ ಜೀಸಸ್ ಸಾಮಾಜಿಕ ಅಭಿವೃದ್ದಿ ಆಯೋಗದ ಗೌರವಾಧ್ಯಕ್ಷ ವಂ.ಫಾ. ವಲೇರಿಯನ್ ಡಿಸೋಜಾ, ಸಂಚಾಲಕ ಸೈಮನ್ ಲೋಬೋ, ಸಾಮಾಜಿಕ ಅಭಿವೃದ್ದಿ ಆಯೋಗದ ಕಾರ್ಯದರ್ಶಿ ಜೀವನ್ ಲೋಬೋ, ಪರಿಸರ ಆಯೋಗದ ಸಂಚಾಲಕ ಅರುಣ್ ಲೂಯಿಸ್ ಪಿಂಟೋ, ರೈತ ಸಂಘದ ವಲಯ ಉಪಾಧ್ಯಕ್ಷ ಆಲ್ವಿನ್ ಲೋಬೋ, ಕಿನ್ನಿಬೆಟ್ಟು ಯುವಶಕ್ತಿ ಕಲಾವೃಂದ ಅಧ್ಯಕ್ಷ ಸುನೀಲ್ ಕಾಯರ್ಮಾರ್, ಗ್ರಾ. ಪಂ. ಅಧ್ಯಕ್ಷ ವಿಜಯ್ ಕುಮಾರ್, ಕಾರ್ಮೆಲ್ ಕಾಲೇಜು ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಭ. ಡಾ. ಲತಾ ಫೆರ್ನಾಂಡೀಸ್, ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಪುರಸಭೆ ಸದಸ್ಯ ಹರಿಪ್ರಸಾದ್, ಸಮನ್ವಯ ಸಮಿತಿ ಕಾರ್ಯದರ್ಶಿ ಪ್ರೊ. ವಿಲ್ರ್ಫ್ರೆಡ್ ಪ್ರಕಾಶ್ ಡಿಸೋಜ, ಕ್ರಿಸ್ಟೋಫರ್ ಎಸೋಸಿಯಷನ್ನ ಅಧ್ಯಕ್ಷ ಐವನ್ ಡಿಸೋಜಾ, ನಿಕಟಪೂರ್ವಾಧ್ಯಕ್ಷ ಸಂದೀಪ್ ಮಿನೇಜಸ್ ಮೊದಲಾದವರು ತೊಡಗಿಸಿಕೊಂಡಿದ್ದರು.
ವರದಿ: ಸಂದೀಪ್ ಸಾಲ್ಯಾನ್