
ಬಂಟ್ವಾಳ: ಫರಂಗಿಪೇಟೆ ಬೀದಿಯಲ್ಲಿ ಅನಾಥನಾಗಿ ಬಿದ್ದುಕೊಂಡಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಸಕಾಲದಲ್ಲಿ ಸಿಕ್ಕ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖನಾಗಿದ್ದಾನೆ. ಮಾತ್ರವಲ್ಲದೆ, ಕಳೆದ 12 ವರ್ಷಗಳಿಂದ ಕುಟುಂಬ ಬಂಧುಗಳಿಂದ ದೂರವಾಗಿ ಉಳಿದಿದ್ದ ಈತ ಇದೀಗ ತನ್ನ ಕುಟುಂಬ ಬಂಧುಗಳನ್ನು ಮರಳಿ ಪಡೆದಿದ್ದಾನೆ.
ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಅವರ ಸಕಾಲಿಕ ಸೇವೆ ಮಾನಸಿಕ ಅಸ್ವಸ್ಥ ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಬದಲಾವಣೆ ತಂದಿದೆ.

ಕಳೆದ ನವೆಂಬರ್ 15 ರಂದು ಫರಂಗಿಪೇಟೆಯ ಶ್ರೀರಾಮ ವಿದ್ಯಾಸಂಸ್ಥೆಯ ಬಳಿ ಮರಳಿನಲ್ಲಿ ಮಾನಸಿಕ ಅಸ್ವಸ್ಥ ಉಮಾಮಹೇಶ್ವರ ಹೊರಳಾಡಿಕೊಂಡಿದ್ದಾಗ ಗಮನಿಸಿದ ಕೃಷ್ಣ ಕುಮಾರ್ ಪೂಂಜ ಊಟ, ಉಪಹಾರ, ಬಟ್ಟೆ ನೀಡಿ ಸೇವಾಂಜಲಿಯ ಬಂಧುಗಳ ಸಹಕಾರ ಪಡೆದು ಅಂದೇ, ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮನೋವೈದ್ಯ ಡಾ. ಶ್ರೀನಿವಾಸ್ ಭಟ್ ಅವರ ಒಂದು ತಿಂಗಳ ಚಿಕಿತ್ಸೆಯ ಬಳಿಕ ಮಾನಸಿಕ ಅಸ್ವಸ್ಥನಾಗಿದ್ದ ಉಮಾಮಹೇಶ್ವರ ಗುಣ ಮುಖನಾಗಿದ್ದಾನೆ.

ಈ ಸಂದರ್ಭ ಕೃಷ್ಣ ಕುಮಾರ್ ಪೂಂಜ ಅವರು ಪೊಲೀಸ್ ಇಲಾಖೆಯ ಸಹಕಾರ ಪಡೆದು ಬೆಂಗಳೂರಿನಲ್ಲಿರುವ ಅವರ ಕುಟುಂಬ ಬಂಧುಗಳನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಿದ್ದಾರೆ. ಸಹೋದರನ ಹುಡುಕಾಟ ನಡೆಸಿ ಇನ್ನು ಸಿಗುವುದಿಲ್ಲ ಎಂದು ಕೈ ಚೆಲ್ಲಿದ್ದ ಉಮಾಮಹೇಶ್ವರ ಅವರ ಕುಟುಂಬ ಬಂಧುಗಳಾದ ವಸಂತ, ಚಂದ್ರಶೇಖರ ಹಾಗೂ ರಾಮಲಿಂಗೇಗೌಡ ಅವರು ಗುರುವಾರ ಸಂಜೆ ದೇರಳಕಟ್ಟೆ ಆಸ್ಪತ್ರೆಗೆ ಭೇಟಿ ನೀಡಿ 12 ವರ್ಷಗಳಿಂದ ಸಂಪರ್ಕದಲ್ಲಿರದ ತಮ್ಮ ಕುಟುಂಬ ಬಂಧುವನ್ನು ನೋಡಿ ಸಂಭ್ರಮಿಸಿದ್ದಾರೆ. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಹಾಗೂ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ. ಶ್ರೀವಾಸ್ ಭಟ್ ಹಾಗೂ ಸಿಬ್ಬಂದಿಗಳ ಮಾನವೀಯ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೃಷ್ಣ ಕುಮಾರ್ ಪೂಂಜ ಅವರ ಜೊತೆ ಸೇವಾಂಜಲಿ ಎಫ್. ಗಣೇಶ್, ಸುಕೇಶ್ ಶೆಟ್ಟಿ ತೇವು, ಪ್ರಶಾಂತ್ ತುಂಬೆ, ಹರಿಣಿ, ನಾರಾಯಣ ಬಡ್ಡೂರು, ವಿಕ್ರಂ ಬರ್ಕೆ ಸಹಕರಿಸಿದ್ದಾರೆ.

ಮನೆ ಬಿಟ್ಟಿದ್ದ ಉಮಾಮಹೇಶ್ವರ:
ಬೆಂಗಳೂರಿನ ತನ್ನ ಮನೆಯಲ್ಲಿದ್ದ ಉಮಾಮಹೇಶ್ವರ ತಿಪಟೂರಿನ ತನ್ನ ಮಾವ ಹಾಗೂ ಭಾವನ ಮನೆಗೆ ಹೋಗಿ ಕೆಲ ದಿನ ಇದ್ದು ಬಳಿಕ ಅಲೂ ಮನೆ ಬಿಟ್ಟು ಬಂದಿದ್ದ. ಮನ ಮಂದಿ ಹಲವು ಸಮಯಗಳ ಕಾಲ ಹುಡಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ತನ್ನ ಜೀವನದ ಕಹಿ ಘಟನೆಯಿಂದ ನೊಂದು ಮಾನಸಿಕ ಅಸ್ವಸ್ಥನಾಗಿದ್ದ. ಆ ಸಂದರ್ಭ ಚಿಕಿತ್ಸೆ ಸಿಗದೆ ಊರುರು ಅಲೆಯುತ್ತ ಇತ್ತೀಚೆಗೆ ಮಂಗಳೂರಿಗೆ ಬಂದು ಫರಂಗಿಪೇಟೆಯ ಬೀದಿಯಲ್ಲಿ ಸುತ್ತಾಡುತ್ತಿದ್ದ.
೧೨ ವರ್ಷಗಳಿಂದ ನಾಪತ್ತೆಯಾಗಿದ್ದ ನನ್ನ ಅಣ್ಣ ಉಮಾಮಹೇಶ್ವರನನ್ನು ಮತ್ತೆ ಜೀವನದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಕೊಂಡಿದ್ದೆ. ಆದರೆ ೧೨ ವರ್ಷದ ಬಳಿಕ ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ ಅವರ ಸಹಕಾರದಿಂದ ಆತ ಮತ್ತೆ ನಮಗೆ ಸಿಕ್ಕಿದ್ದಾನೆ. ಆತನ ಆರೋಗ್ಯವೂ ಸುಧಾರಣೆಯಾಗಿದ್ದು ನಮಗೆ ತುಂಬಾ ಸಂತೋಷವಾಗಿದೆ. – ವಸಂತ, ಉಮಾಮಹೇಶ್ವರನ ಸಹೋದರ
.॒.
ಫರಂಗಿಪೇಟೆಯಲ್ಲಿ ಮಣ್ಣಿನಲ್ಲಿ ಹೊರಳಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿದ್ದು ಆತ ಗುಣಮುಖನಾಗಿದ್ದಾನೆ. ೧೨ ವರ್ಷಗಳಿಂದ ಸಂಪರ್ಕದಲ್ಲಿರದ ಆತನ ಕುಟುಂಬ ಬಂಧುಗಳು ಪೊಲೀಸರ ಸಹಕಾರದಿಂದ ಮರಳಿ ಸಿಕ್ಕಿದ್ದಾರೆ- ಕೃಷ್ಣಕುಮಾರ್ ಪೂಂಜ, ಆಡಳಿತ ಟ್ರಸ್ಟಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ
