ಬಂಟ್ವಾಳ: ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ದತ್ತು ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ಹಂತದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಲಾಯಿತು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಗೌರವಾಧ್ಯಕ್ಷ, ರಾಜ್ಯ ಹೈಕೋರ್ಟ್ ನ್ಯಾಯವಾದಿ ಎಸ್.ರಾಜಶೇಖರ್ ಚಾಲನೆ ನೀಡಿದರು. ಸುಮಾರು ಒಂದು ಕೋಟಿ ರುಪಾಯಿಗೂ ಅಧಿಕ ವೆಚ್ಚದ ಮೂರನೇ ಹಂತದ ಕಾಮಗಾರಿಯಲ್ಲಿ 25 ಲಕ್ಷ ರುಪಾಯಿ ವೆಚ್ಚದ ಆವರಣ ಗೋಡೆ, 25 ಲಕ್ಷ ರುಪಾಯಿ ವೆಚ್ಚದ ಸುಸಜ್ಜಿತ ಸಭಾಂಗಣ, 50 ಲಕ್ಷ ರುಪಾಯಿ ವೆಚ್ಚದ 11 ತರಗತಿ ಕೋಣೆ ಸೇರಿದಂತೆ ಇನ್ನಿತರ ಹಲವಾರು ಕೆಲಸಗಳು ನಡೆಯಲಿದೆ. ಈ ಸಂದರ್ಭ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಸದಸ್ಯ ಮಯೂರ್ ಕೀರ್ತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಉದ್ಯಮಿ ಶೇಖರ್ ಅಂಚನ್, ದಡ್ಡಲಕಾಡು ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ನವೀನ್ ಸೇಸಗುರಿ ಹಾಜರಿದ್ದರು. ಬಳಿಕ ಸರಕಾರಿ ಶಾಲೆ ಉಳಿಸ ರಾಜ್ಯ ಸಮಿತಿಯ ಮಾಸಿಕ ಸಭೆ ನಡೆಯಿತು. ಇದಕ್ಕಿಂತಲೂ ಮುಂಚಿತವಾಗಿ ದಡ್ಡಲಕಾಡು ಸ.ಹಿ.ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪೋಷಕರ ಸಭೆ ನಡೆಯಿತು.