ಬಂಟ್ವಾಳ: ಸುರಿಯುವ ಮಳೆಯ ಮಧ್ಯೆಯೂ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಚಿಣ್ಣರೋತ್ಸವ ಭಾನುವಾರ ರಾತ್ರಿ ಯಶಸ್ವಿಯಾಗಿ ನಡೆದಿದೆ. ಆಗಾಗ್ಗೆ ಬಿರುಸಿನ ಮಳೆ ಸುರಿಯುತ್ತಿದ್ದರೂ ಕೂಡ ಮಳೆಯನ್ನು ಲೆಕ್ಕಿಸದೇ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷರಿಂದ ಸೈ ಎನಿಸಿ ಕೊಂಡರು.
ನಭದಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆಯೇ ದಡ್ಡಲಕಾಡು ಶಾಲಾ ಮೈದಾನದ ಸುತ್ತ ಹಾಕಲಾಗಿದ್ದ ಗ್ಯಾಲರಿ ಪ್ರೇಕ್ಷಕರಿಂದ ತುಂಬಿಕೊಂಡಿತ್ತು. ಶಾಲೆಯ ಎಲ್ ಕೆ ಜಿ ವಿದ್ಯಾರ್ಥಿಗಳ ಸಂಗೀತ ಪ್ರದರ್ಶನದೊಂದಿಗೆ ದಡ್ಡಲಕಾಡು ಚಿಣ್ಣರೋತ್ಸವ ಆರಂಭಗೊಂಡು ನೃತ್ಯ, ನಾಟಕ, ಕರಾಟೆ, ಬೆಂಕಿ ಸಾಹಸ, ಸಹಿತ ವಿವಿಧ ಸಾಮೂಹಿಕ ಚಿತ್ತಾರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಪ್ರೇಕ್ಷಕರ ಮನ ರಂಜಿಸಿದರು.
ಮಳೆಯ ನಡುವೆಯೂ ನಿಲ್ಲದ ಉತ್ಸಾಹ:
ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿತ್ತಿದ್ದಂತೆಯೆ ಭಾರಿ ಮಳೆ ಸುರಿಯಲಾರಂಭಿಸಿತು. ಅಯ್ಯೋ ಮಳೆ ಬಂತಲ್ಲಾ ಎಂದು ಪ್ರೇಕ್ಷಕರು ನಿರಾಶರಾದರು ವಿದ್ಯಾರ್ಥಿಗಳಲ್ಲಿ ಮಾತ್ರ ಉತ್ಸಾಹ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಈ ವೇಳೆ ಶ್ರೀ ದೇವಿ ಮಹಿಷಾಸುರನನ್ನು ವಧೆ ಮಾಡುವ ಸನ್ನಿವೇಶದ ನೃತ್ಯ ಪದರ್ಶ ನಡೆಯುತ್ತಿದ್ದು ವಿದ್ಯಾರ್ಥಿಗಳು ಮಳೆಗೆ ಅಂಜದೆ ಭರ್ಜರಿಯಾಗಿ ಪ್ರದರ್ಶನ ನೀಡಿದರು. ಪ್ರೇಕ್ಷರಿಂದ ಚಪ್ಪಾಳೆಯ ಮೆಚ್ಚುಗೆ ವ್ಯಕ್ತವಾಯಿತು. ಆ ಬಳಿಕ ಪದೇ ಪದೇ ಮಳೆ ಅಡ್ಡಿಪಡಿಸಿದರೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.
ಮೆಚ್ಚುಗೆ ಪಡೆದ ಹುಲಿ ಕುಣಿತ:
ವಿದ್ಯಾರ್ಥಿಗಳ ಹುಲಿ ಕುಣಿತ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಶಾಲೆಯ 73 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಮೈದಾನಕ್ಕಿಳಿದು ಹುಲಿ ಕುಣಿತ ಪ್ರದರ್ಶಿಸಿದರು. ಅನುಭವಿ ಹುಲಿ ವೇಷಧಾರಿಗಳನ್ನೇ ನಾಚಿಸುವಂತೆ ಕುಣಿದು ಮನರಂಜಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್, ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ
ಕಿಯೋನಿಕ್ಸ್ ನಿಕಟಪೂರ್ವಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಚಿಣ್ಣರೋತ್ಸವ ವೀಕ್ಷಿಸಿದರು.