ಬಂಟ್ವಾಳ: ತಾಲೂಕಿನ ತಲಪಾಡಿಯ ಪೊನ್ನೋಡಿಯಲ್ಲಿರುವ ಕರ್ನಾಟಕ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಅನ್ನಭಾಗ್ಯದ ಫಲಾನುಭವಿಗಳಿಗೆ ಸಲ್ಲುವ ಒಟ್ಟು ೩೮೫೦ ಕ್ವಿಂಟಾಲ್ ಅಕ್ಕಿ ಕಳವಾಗಿ ಹಲವು ಸಮಯ ಕಳೆದಿದ್ದು ಇದರ ನೈಜ ಅಪರಾಧಿಗಳನ್ನು ಪತ್ತೆ ಮಾಡುವಂತೆ ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ತಲಪಾಡಿ ಪೊನ್ನೋಡಿಯಲ್ಲಿ ಪಡಿತರ ದಾಸ್ತನಿನಲ್ಲಿ ಕೊರತೆ ಕಂಡು ಬಂದಿರುವ ಬಗ್ಗೆ ಶಾಸಕ ರಾಜೇಶ್ ನಾಕ್ ಅವರು ದ.ಕ. ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಳಿ ನಡೆಸಿ ಪಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ೩೮೫೦ ಕ್ವಿಂಟಲ್ ಅಕ್ಕಿ ಕಳ್ಳತನವಾಗಿರುವುದು ಕಂಡು ಬಂದಿದೆ. ಬಡವರ ಪಡಿತರ ಅಕ್ಕಿಯನ್ನು ಜನರಿಗೆ ನೀಡದೆ ಕಸಿದು ಕಳ್ಳತನದ ಮೂಲಕ ಅವ್ಯವಹಾರ ಮಾಡುವ ಗ್ಯಾಂಗನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ತುಂಗಪ್ಪ ಬಂಗೇರ ಆರೋಪಿಸಿದರು. ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತಹ ಅಧಿಕಾರಿಗಳಿಗೆ, ಅದಕ್ಕೆ ಪ್ರೋತ್ಸಾಹಿಸುವ ದಳ್ಳಾಳಿಗಳಿಗೆ ಶಿಕ್ಷೆ ಆಗಲೇ ಬೇಕು ಹಾಗೂ ಅವರನ್ನು ತಕ್ಷಣ ಬಂಧಿಸಬೇಕು, ಇಲ್ಲವಾದಲ್ಲಿ ತಾಲೂಕಿನ ಬಿಪಿಎಲ್ ಕಾರ್ಡ್ಕುಟುಂಬದವರು ಉಗ್ರ ಪ್ರತಿಭಟನೆ ನಡೆಸಲು ಸನ್ನದ್ಧರಾಗಿರುವುದಾಗಿ ತುಂಗಪ್ಪ ಬಂಗೇರ ಎಚ್ಚರಿಸಿದರು.
ಆಹಾರ ನಿರೀಕ್ಷಕರನ್ನು ಅಮಾನತು ಮಾಡಿ ಸರಕಾರ ಕೈ ತೊಳೆದುಕೊಂಡಿದೆ. ಗೋದಾಮಿನಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಬಂಧಿಸಿ ಬಾಯಿ ಬಿಡಿಸಿದರೆ ಅಕ್ಕಿ ಕಳ್ಳತನದ ಜಾಲ ಹೊರ ಬರಲಿದೆ. ರಾಜ್ಯಾದ್ಯಂತ ಅಕ್ಕಿ ಕಳ್ಳರ ಜಾಲವೇ ತುಂಬಿ ಕೊಂಡಿದೆ. ಅದನ್ನು ಹತ್ತಿಕ್ಕಲು ಸರಕಾರ ವಿಫಲವಾಗಿದೆ. ಈ ಬಗ್ಗೆ ಸರಕಾರ ಸ್ಪಂದಿಸದೇ ಇದ್ದಲ್ಲಿ ಜನಾಂದೋಲನ ನಡೆಸುವುದಾಗು ತುಂಗಪ್ಪ ಬಂಗೇರ ಆಗ್ರಹಿಸಿದರು.