ಬಂಟ್ವಾಳ ತಾಲೂಕಿನ ಬೆಂಜನಪದವು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕ್ಲಾಂತ ಕನ್ನಡ ಚಿತ್ರದ ತುಳು ಧ್ವನಿಸುರುಳಿ ಕಾರ್ಯಕ್ರಮ ನಡೆಯಿತು. ಖ್ಯಾತ ಹಿನ್ನಲೆಗಾಯಕ ರಾಜೆಶ್ ಕೃಷ್ಣನ್ ಅವರು ಈ ತುಳು ಹಾಡನ್ನು ಹಾಡಿದ್ದು ಸ್ವತಃ ಅವರೇ ಧ್ವನಿ ಸುರುಳಿಯನ್ನು ಬೆಂಜನಪದವಿನ ಕೊರಗಜ್ಜ ಸನ್ನಿಧಿಯಲ್ಲಿ ಬಿಡುಗಡೆಗೊಳಿದರು. ಈ ಸಂದರ್ಭ ಕ್ಲಾಂತ ಚಿತ್ರತಂಡ ಅವರ ಜೊತೆಗಿತ್ತು.
ತುಳುನಾಡಿನ ಕಾರಣಕ ದೈವ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿದ ರಾಜೇಶ್ ಕೃಷ್ಣನ್ ಭಕ್ತಿಯಿಂದ ಶ್ರೀ ಕೊರಗಜ್ಜನಿಗೆ ನಮಿಸಿ ಚಿತ್ರದ ತುಳು ಧ್ವನಿ ಸುರುಳಿ ಬಿಡುಗಡೆಗೊಳಿಸಿದರು. ಹಾಡು ಕೇಳಿ ಬರುತ್ತಿದ್ದಂತೆಯೇ ಕೈ ಮುಗಿದು ಹಾಡನ್ನು ಹಾಡುತ್ತ ಭಾವಪರವಶರಾದರು. ಬಳಿಕ ಬೆಂಜನಪದವು ಕೊರಗಜ್ಜ ಕ್ಷೇತ್ರ ಹಾಗೂ ಕ್ಲಾಂತ ಚಿತ್ರ ತಂಡದ ವತಿಯಿಂದ ರಾಜೇಶ್ ಕೃಷ್ಣನ್ ಅವರನ್ನು ಗೌರವಿಸಲಾಯಿತು. ಕ್ಷೇತ್ರದ ಧರ್ಮದರ್ಶಿಗಳು ದೈವದ ಕರಿಗಂಧ, ಪ್ರಸಾದವನ್ನು ಚಿತ್ರತಂಡ ಹಾಗೂ ರಾಜೇಶ್ ಕೃಷ್ಣನ್ ಅವರಿಗೆ ನೀಡಿದರು.
ಚಿತ್ರದ ನಿರ್ದೆಶಕ ವೈಭವ್ ಪ್ರಶಾಂತ್ ಅವರು ಮಾತನಾಡಿ ಈಗಾಗಲೇ ಕ್ಲಾಂತ ಚಿತ್ರೀಕರಣ ಪೂರ್ಣಗೊಂಡಿದ್ದು ಆದಷ್ಟು ಬೇಗ ಚಿತ್ರ ಸಿನಿಮಾ ಮಂದಿರಕ್ಕೆ ಬರಲಿದೆ. ಕನ್ನಡ ಚಿತ್ರದಲ್ಲಿ ಒಂದು ತುಳು ಹಾಡು ಇದ್ದು ಅದನ್ನು ರಾಜೆಶ್ ಕೃಷ್ಣನ್ ಅವರು ಹಾಡಿದ್ದಾರೆ. ಇದೀಗ ಮಂಗಳೂರಿಗೆ ಬಂದು ಕೊರಗಜ್ಜನ ಕ್ಷೇತ್ರದಲ್ಲಿ ಧ್ವನಿ ಸುರುಳಿ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿಸಿದ ಅವರು ಕ್ಲಾಂತ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಚಿತ್ರದ ನಿರ್ಮಾಪಕ ಉದಯ್ ಅಮ್ಮಣ್ಣಾಯ, ನಿರ್ದೆಶಕ ವೈಭವ್ ಪ್ರಶಾಂತ್, ಸಂಗೀತ ನಿರ್ದೆಶಕ ಎಸ್.ಪಿ. ಚಂದ್ರಕಾಂತ್, ಚಿತ್ರನಟ ತಿಮ್ಮಪ್ಪ ಕುಲಾಲ್, ಚಿತ್ರದ ನಾಯಕ ವಿಘ್ನೇಶ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು