ಬಂಟ್ವಾಳ: ಅಕ್ಷಯಪಾತ್ರೆ ಫೌಂಡೇಶನ್ನ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ ೨೩ ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಅಕ್ಷಯಪಾತ್ರ ನೀಡುವ ಸಾತ್ವಿಕ ಆಹಾರದ ಮೂಲಕ ಮಕ್ಕಳಿಗೆ ಆದ್ಯಾತ್ಮಿಕ ಸಾಧನೆಯನ್ನು ನೀಡುವ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿನಿಂತಿರುವ ಈ ಘಟಕ ಯಶಸ್ವಿಯಾಗಿ ನಡೆಯಲಿ. ಇಸ್ಕಾನ್ ಮೂಲಕ ಕೃಷ್ಣನ ಪ್ರಸಾದದ ರವಾನೆ ಇಡೀ ಪ್ರಪಂಚಾದಾದ್ಯಂತ ನಡೆಯಲಿ ಎಂದು ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.
ಅಕ್ಷಯ ಪಾತ್ರೆ ಫೌಂಡೇಶನ್ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ನಿರ್ಮಿಸಿರುವ ಕೇಂದ್ರೀಕೃತ ಅಡುಗೆ ಮನೆಗೆ ಚಾಲನೆ ನೀಡಿ ಆರ್ಶೀವಚನ ನೀಡಿದರು.
ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಮಾತನಾಡಿ ಮಂಗಳೂರಿನಲ್ಲಿ ನಮ್ಮ ಅತ್ಯಾಧುನಿಕ ಅಡುಗೆಮನೆಯ ಪ್ರಾರಂಭವು ಅಕ್ಷಯ ಪಾತ್ರ ಫೌಂಡೇಶನ್ನ ಪ್ರಗತಿಯನ್ನು ಸೂಚಿಸುತ್ತದೆ. ಮಕ್ಕಳ ಕಲ್ಯಾಣ ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ನಮ್ಮ ಬದ್ಧತೆ ಪ್ರತಿಬಿಂಬವಾಗಿದೆ. ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಸಚಿವಾಲಯದ ನಿರಂತರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದರು. ಅಕ್ಷಯ ಪಾತ್ರ ಫೌಂಡೇಶನ್ನ ಉಪಾಧ್ಯಕ್ಷ ಚಂಚಲಪತಿ ದಾಸ್ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮ ಮಂಗಳೂರು ಅಡುಗೆ ಮನೆ ಪಾಕಶಾಸ್ತ್ರದ ಆವಿಷ್ಕಾರದ ಕೇಂದ್ರವಾಗಿ ಬದಲಾಗುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. ಈ ಅಡುಗೆಮನೆಯಿಂದ ತಯಾರಾಗಿ ಹೊರಬರುವ ಪ್ರತಿಯೊಂದು ಊಟವೂ ಹಸಿವು-ಮುಕ್ತ ಭವಿಷ್ಯದ ನಮ್ಮ ಕನಸನ್ನು ನನಸಾಗಿಸುವತ್ತ ಒಂದು ಹೆಜ್ಜೆಯಾಗಿದೆ, ಅಸಂಖ್ಯಾತ ಮಕ್ಕಳಿಗೆ ಭರವಸೆ ಮತ್ತು ಪೋಷಣೆಯ ಬೆಳಕನ್ನು ನೀಡುತ್ತದೆ ಎಂದರು.
ಕೊಡಚಾದ್ರಿ ಗುರುಕುಲದ ಉಸ್ತುವಾರಿಗಳಾದ ತತ್ವದರ್ಶನ ಸ್ವಾಮಿಜಿ, ಮೇರಮಜಲು ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ್ ನಾಯ್ಗ, ಅಮ್ಮುಂಜೆ ಪಂಚಾಯತಿ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ ಉಪಸ್ಥಿತರಿದ್ದರು. ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ್ ಸ್ವಾಗತಿಸಿದರು, ಸನಂದನದಾಸ ಸ್ವಾಮೀಜಿ ವಂದಿಸಿದರು, ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.