ಬಂಟ್ವಾಳ : ಏಡ್ಸ್ ಬಗ್ಗೆ ಜಗತ್ತಿನಲ್ಲಿ ಉಂಟುಮಾಡಿರುವ ಜಾಗೃತಿಯ ಪರಿಣಾಮವಾಗಿ ಇಂದು ಈ ಆರ್ಜಿತ ರೋಗವು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಹೇಳಿದರು. ಅವರು ಶುಕ್ರವಾರ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನಾಚರಣೆನ್ನು
ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲೇ ಏಡ್ಸ್ ಮತ್ತಿತರ ಕಾಯಿಲೆಗಳ ಬಗ್ಗೆ ಸೂಕ್ತ ಅರಿವು ಮೂಡುವುದೇ ಭವಿಷ್ಯದ ಸುಂದರ ಬದುಕಿಗೆ ರಹದಾರಿ ಎಂದು ಅವರು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಮಾತನಾಡಿ ಜನ ಸಮುದಾಯದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವುದೇ ಈ ಸಾಲಿನ ಆಚರಣೆಯ ಪ್ರಧಾನ ಧ್ಯೇಯ ಎಂದು ಹೇಳಿದರು.
ನಿವೃತ್ತ ಮಲೇರಿಯಾ ಜಿಲ್ಲಾ ನಿಯಂತ್ರಣಾಧಿಕಾರಿ ಜಯರಾಮ ಪೂಜಾರಿ ಏಡ್ಸ್ ಜಾಗೃತಿ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್ ನಿಯಂತ್ರಣ ಸೊಸೈಟಿ, ತಾಲೂಕು ಆರೋಗ್ಯ ಇಲಾಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಟ್ವಾಳ ,ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.
ಎನ್ ಎಸ್ ಎಸ್ ಸಂಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ , ಆರೊಗ್ಯ ಸುರಕ್ಷಾ ಅಧಿಕಾರಿ ಸೌಮ್ಯ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ದಾಮೋದರ್ ಸ್ವಾಗತಿಸಿದರು. ತಾಲೂಕು ಐಸಿಟಿಸಿ ಆಪ್ತಸಮಾಲೋಚಕಿ ಶ್ರೀಮತಿ ವಾಣಿ ಕೆ ಧನ್ಯವಾದಗೈದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.