ಬಂಟ್ವಾಳ: ಜಿಲ್ಲೆಯಲ್ಲಿ ಶಿಸ್ತುಬದ್ಧ ಶಿಕ್ಷಕರು ಸುಸಂಸ್ಕೃತ ಮತ್ತು ಶಿಸ್ತು ಬದ್ಧ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದಾರೆ. ಶಿಕ್ಷಕರಿಗೆ ಅನಗತ್ಯ ಕರ್ತವ್ಯದ ಹೊರೆ, ಪಠ್ಯಪುಸ್ತಕ ಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ರಾಜ್ಯದಲ್ಲಿ ಶಿಕ್ಷಣತಜ್ಞರ ನೇತೃತ್ವದಲ್ಲಿ ಪಠ್ಯ ರಚನೆ ಮತ್ತು ಶಿಕ್ಷಣ ನೀತಿ ಜೊತೆಗೆ ಮೂಲಭೂತ ಸೌಕರ್ಯ ಒದಗಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣದಿಂದ ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ. ರಾಜ್ಯದಲ್ಲಿ ಶೇ.45 ರಷ್ಟು ಶಿಕ್ಷಕರ ಕೊರತೆ ಸಹಿತ ಶೌಚಾಲಯ, ಕೊಠಡಿ ಸಮಸ್ಯೆ ಕಾಡುತ್ತಿದೆ. ಸರ್ಕಾರಿ ಸೇರಿದಂತೆ ಅನುದಾನಿತ, ಅನುದಾನರಹಿತ ಶಾಲೆಗಳ ನಡುವೆ ತಾರತಮ್ಯ ಸಲ್ಲದು ಎಂದು ವಿಧಾನಪರಿಷತ್ ಸದಸ್ಯ ಎಸ್ಎಲ್.ಭೋಜೇ ಗೌಡ ಹೇಳಿದರು.
ಅವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇದರ ದ.ಕ. ಜಿಲ್ಲಾ ಘಟಕ ಮತ್ತು ಬಂಟ್ವಾಳ ತಲೂಕು ಘಟಕದ ಸಹಯೋಗದೊಂದಿಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಮಂಗಳವಾರ ನಡೆದ ಪ್ರೌಢಶಾಲಾ ಸಹಶಿಕ್ಷಕರ ಜಿಲ್ಲಾ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆರೋಗ್ಯ ಮತ್ತು ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡುವ ಅಗತ್ಯವಿದ್ದು ಶಿಕ್ಷಕರ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವ ಕೆಲಸ ವಿಧಾನಸಭೆಯಲ್ಲೂ ನಡೆಯಬೇಕು, ಸ್ವಸ್ಥ ಸಮಾಜ ನಿರ್ಮಿಸಲು ನಾವೆಲ್ಲರೂ ಮಾನವೀಯ ಮೌಲ್ಯ ಎತ್ತಿ ಹಿಡಿಯೋಣ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಸಮ್ಮೇಳನ ಉದ್ಘಾಟಿಸಿದರು. ಅವರು ಮಾತನಾಡಿ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವ ಪೂರ್ಣವಾದುದು. ಪ್ರೌಢಶಾಲಾ ಶಿಕ್ಷಕರ ಸಮಸ್ಯೆ ಬಹಳಿಷ್ಟಿದ್ದು ಅನೇಕ ಸಮಸ್ಯೆಗಳು ಈಗಾಗಲೇ ಪರಿಹಾರಗೊಂಡಿದೆ. ಈಗಿರುವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಎಚ್.ಕೆ. ಮಂಜುನಾಥ್, ಎಂ.ಪಿ. ಪಿ.ಎಂ. ಪೋಷಣ್ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಸಹಿತ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು, ಅತ್ಯಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇಲ್ಲಿನ ಉಪ ನಿರ್ದೇಶಕಿ ರಾಜಲಕ್ಷ್ಮಿ ಕೆ., ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಸಂಘದ
ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ, ಪ್ರಧಾನ ಕಾರ್ಯದರ್ಶಿ ರಾಮು ಅ. ಗಂಗವಾಡ, ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್, ರಾಜ್ಯ ಸಹಕಾರ್ಯದರ್ಶಿ ದೇವರಾಜೇಗೌಡ, ರಾಜ್ಯ ಉಪಾದ್ಯಕ್ಷ ಸ್ಟ್ಯಾನಿ ಜಿ. ತಾವ್ರೋ ಪ್ರಮಯುಖರಾದ ಧರ್ಮಪಾಲ್ ಡಯಾಟ್ ಉಪನ್ಯಾಸಕಿ ಫಾತೀಮಾ
ಶಿವಪ್ರಸಾದ್ ಶೆಟ್ಟಿ, ರಾಘವೇಂದ್ರ ಬಳ್ಳಾಲ್, ಆಶಾ ನಾಯಕ್, ತಾರಕೇಸರಿ, ಪ್ರಮೀಳಾ, ಅಬ್ರಾಹಂ, ರಾಮಕೃಷ್ಣ ಶಿರೂರು, ಶಾಂತರಾಮ, ಚಂದ್ರಶೇಖರ್, ರಾಧಕೃಷ್ಣ, ರಾಘವೇಂದ್ರ ರಾವ್, ಬಸನಗೌಡ, ಲಿಲ್ಲಿ ಪಾಯಿಸ್ ಉಪಸ್ಥಿತರಿದ್ದರು.
ತಾಲೂಕು ಸಂಘದ ಅಧ್ಯಕ್ಷ ಜೋಯಲ್ ಲೋಬೋ ಸ್ವಾಗತಿಸಿದರು, ಜಿಲ್ಲಾ ಕಾರ್ಯದರ್ಶಿ ಮಾರ್ಕ್ ಜೆ. ಮೆಂಡೋನ್ಸಾ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಸಹಕಾರ್ಯದರ್ಶಿ ಶಶಿಕಾಂತ ಚೆಂಬರ್ಪು ವಂದಿಸಿದರು. ಶಿಕ್ಷಕ ಮಹೇಶ್ ಕರ್ಕೆರಾ ಕಾರ್ಯಕ್ರಮ ನಿರೂಪಿಸಿದರು.