ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಂಗಳೂರು, ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು, ಚಿತ್ರಕಲಾ ಶಿಕ್ಷಕ ಸಂಘ ಬಂಟ್ವಾಳ ತಾಲೂಕು ಘಟಕ ಇದರ ಸಹಯೋಗದಲ್ಲಿ ಚಿತ್ರಕಲಾ ಶಿಕ್ಷಕರಿಗೆ ಶೈಕ್ಷಣಿಕ ಕಲಾ ಕಾರ್ಯಗಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಬುಧವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಕಾರ್ಯಗಾರ ಉದ್ಘಾಟಿಸಿದರು. ಅವರು ಮಾತನಾಡಿ ಪ್ರಕೃತಿಯೇ ಒಂದು ಚಿತ್ರ. ಪ್ರಕೃತಿಯ ಸೌಂದರ್ಯವನ್ನು ಆಸ್ವಾಸಿದವರೇ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಚಿತ್ರಕಲೆ ಸುಂದರ ಹಾಗೂ ಅದ್ಭುತವಾದ ಕೆಲಸ. ಇದು ಎಲ್ಲರಿಗೂ ಒಲಿಯುವುದಿಲ್ಲ. ನನ್ನ ಬಾಲ್ಯದಲ್ಲೂ ಚಿತ್ರಕಲಾ ಶಿಕ್ಷಕರು ಪ್ರಭಾವ ಬೀರಿದ್ದರು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವೆಲ್ಲರು ಒಟ್ಟಿ ಸೇರಿ ನಮ್ಮೊಳಗೆ ಚರ್ಚೆಗಳು ನಡೆದಾಗ ಹೊಸ ವಿಷಯ ಕಲಿಯಲು ವೇದಿಕೆ ದೊರೆಯುತ್ತದೆ. ಆ ಕಾರಣಕ್ಕಾಗಿ ಇಂತಹ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾವು ಎಲ್ಲಾ ಸರಕಾರಿ ಕಚೇರಿಗಳನ್ನು ಸುಂದರಗೊಳಿಸಿದ್ದೇವೆ. ಅಂತೆಯೇ ಚಿತ್ರಕಲಾ ಶಿಕ್ಷಕನ ಬದುಕು ಸುಂದರಗೊಳ್ಳುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕಾಗಿದೆ. ಇಲಾಕೆಯಿಂದ ಚಿತ್ರಕಲಾ ಶಿಕ್ಷಕರಿಗೆ ಪ್ರೋತ್ಸಾಹ, ಸಹಕಾರ ಸಿಗಬೇಕು ಎಂದರು.
ಶಿಕ್ಷಣ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸಬೇಕು. ಮಕ್ಕಳಲ್ಲಿ ಕ್ರಿಯೆಟಿವಿಟಿ ಮೂಡಿಸಬೇಕು. ಶಿಕ್ಷಣದಲ್ಲಿ ಚಿತ್ರಕಲೆ, ಲಲಿತಾಕಲೆಗೆ ಪ್ರೋತ್ಸಾಹ ನೀಡಿದಾಗ ವಿದ್ಯಾರ್ಥಿಗಳು ಲವಲವಿಕೆಯಿಂದ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತು ಸಂಸ್ಥೆಯ ಉಪನ್ಯಾಸಕ ಶ್ರೀನಿವಾಸ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಯಾವುದೇ ವೃತ್ತಿಯಲ್ಲಿ ಪ್ರಯತ್ನದ ಜೊತೆಗೆ ನಾವು ನಮ್ಮನ್ನು ಪುನಶ್ಚೇತನ ಗೊಳಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು. ಪ್ರಾವೀಣ್ಯತೆ ಯನ್ನು ಪಡೆದಾಗ ಪಠ್ಯ ಪುಸ್ತಕದ ಅಗತ್ಯವಿರುವುದಿಲ್ಲ. ಅಂತಹ ಪ್ರಾವಿಣ್ಯತೆಯನ್ನು ನಾವು ಪಡೆದುಕೊಳ್ಳಬೇಕು. ನಾನು ಮಾಡುತ್ತೇನೆ ಎನ್ನುವ ಧೈರ್ಯ ಇದ್ದಾಗ ಎಂದಹ ಕಠಿಣ ಕೆಲಸಗಳನ್ನು ಮಾಡಲು ಸಾಧ್ಯವಿದೆ ಎಂದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡೊಂಗರಕೇರಿ ಶಾಲೆ ಚಿತ್ರಕಲಾ ಶಿಕ್ಷಕಿ ರಾಜೇಶ್ವರಿ ಕೆ. ಹಾಗೂ ಪೆರ್ನೆ ರಾಮಚಂದ್ರ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ
ಚೆನ್ನಕೇಶವ ಡಿ.ಆರ್.ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಲ್, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ, ತಾಲೂಕು ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಕೇಶವ ಡಿ.ಆರ್. ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಕಾರ್ಯದರ್ಶಿ ಬಿ.ಎಂ.ರಫೀಕ್ ತುಂಬೆ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಚಿತ್ರಕಲಾ ಶಿಕ್ಷಕ ಮುರಳೀಕೃಷ್ಣ ರಾವ್ ವಂದಿಸಿದರು.
ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.