ಬಂಟ್ವಾಳ: ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸಿಟ್ಯೂಷನ್ ಪ್ರವರ್ತಿತ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಉದ್ಘಾಟನಾ ಸಮಾರಂಭ ತುಂಬೆಯಲ್ಲಿ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸಿಟ್ಯೂಷನ್ನ ಅಧ್ಯಕ್ಷ ರೆ.ಫಾ. ಡಾ. ಪೀಟರ್ ಪೌಲ್ ಸಲ್ದಾನ ನೂತನ ನರ್ಸಿಂಗ್ ಕಾಲೇಜನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮದ ಸಭಾದ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ವೈದ್ಯರೊಂದಿಗೆ ನರ್ಸ್ಗಳು ಕೂಡ ರೋಗಿಗಳಿಗೆ ಉತ್ತಮ ಸೇವೆ, ಆರೈಕೆ ನೀಡಿದಾಗ ಸಂಸ್ಥೆ ಬೆಳೆಯಲು ಸಾಧ್ಯವಿದೆ. ನಮ್ಮ ಬಾಹ್ಯ ಸೌಂದರ್ಯಕ್ಕಿಂತ ರೋಗಿಯ ಸೇವೆ ಮಾಡುವಂತ ಆಂತರ್ಯದ ಸೌಂದರ್ಯ ನಮ್ಮನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ಇಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯು ಇದನ್ನು ಮನಗಂಡು ತಮ್ಮ ಭವಿಷ್ಯವನ್ನು ಉತ್ತಮ ಪಡಿಸಿಕೊಳ್ಳುವಂತೆ ಶುಭ ಹಾರೈಸಿದರು.
ಮುಖ್ಯ ಅತಿಥಿ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಶಿಲಾಫಲಕ ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಫಾದರ್ ಮುಲ್ಲರ್ ಆಸ್ಪತ್ರೆ ಉದ್ಘಾಟನೆಗೊಂಡಿರುವುದು ಕೇವಲ ಸಂಸ್ಥೆಗೆ ಮಾತ್ರವಲ್ಲ ಇಡೀ ತುಂಬೆ ಗ್ರಾಮಕ್ಕೆ ಕೀರ್ತಿ ತಂದಂತಾಗಿದೆ ಎಂದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಆರಂಭವಾಗುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ದಿಗೂ ಈ ಸಂಸ್ಥೆ ಮುನ್ನುಡಿ ಬರೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿ.ಎ. ಗ್ರೂಪ್ ನ ಆಡಳಿತ ನಿರ್ದೇಶಕ ಬಿ.ಅಬ್ದುಲ್ ಸಲಾಂ ಮಾತನಾಡಿ ನರ್ಸಿಂಗ್ ಕೇವಲ ವೃತ್ತಿಯಲ್ಲ. ಇದೊಂದು ಸೇವೆ ಎಂದು ಬಣ್ಣಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೊಜಾ,
ಉದ್ಯಮಿ ಮೈಕಲ್ ಡಿಸೋಜಾ ದಂಪತಿ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಕಿರಣ್ ಶೆಟ್ಟಿ
ಉಪಸ್ಥಿತರಿದ್ದರು.
ಈ ಸಂದರ್ಭ ಕಾಲೇಜು ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಸಿಯಸ್ ಕುವೆಲ್ಯೋ ಸ್ವಾಗತಿಸಿದರು. ಆಡಳಿತಾಧಿಕಾರಿ ರೆ.ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ಭಗಿನಿ ಧನ್ಯ ದೇವಸ್ಯ ಎಂ. ವಂದಿಸಿದರು. ಸ್ಥಳೀಯ ಪಂಚಾಯತಿ ಪ್ರತಿನಿಧಿಗಳು, ಸಂಸ್ಥೆಯ ಹಿತೈಷಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.