ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಬಾಂಬಿಲ, ತಲೆಂಬಿಲ ನಿವಾಸಿ ವಿಲ್ಮಾ ಪ್ರಿಯಾ ಅಲ್ಬುಕರ್ಕ್ ಸಮಗ್ರ ಕೃಷಿಯ ಮೂಲಕ ಖುಷಿ ಕಂಡು ಕೊಂಡಿದ್ದಾರೆ. ಎಂಎಸ್ಡಬ್ಲ್ಯು ಪದವೀಧರೆಯಾಗಿರುವ ವಿಲ್ಮಾ ಕೃಷಿಯಲ್ಲಿ ಆಸಕ್ತಿ ಕಂಡು ಕೊಂಡು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಸ್ನಾತಕೋತ್ತರ ಪದವಿಧರೆಯಾಗಿದ್ದ ವಿಲ್ಮಾ ಉದ್ಯೋಗವನ್ನು ಅರಸಿಕೊಂಡು ಹೋದರು ಸೂಕ್ತವಾದ ಕೆಲಸ ಕೈ ಹಿಡಿಯದೇ ಇದ್ದಾಗ ಕೃಷಿ ಕ್ಷೇತ್ರದತ್ತ ಆಸಕ್ತಿ ಹೊಂದಿದರು. ಇವರ ಪತಿ ಟೆರೆನ್ಸ್ ಅರುಣ್ ಡಿಸೋಜಾ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಿಯಾಗಿದ್ದು ಬಳಿಕ ಊರಿಗೆ ಮರಳಿ ಇತರ ಉದ್ಯೋಗದತ್ತ ಗಮನ ಹರಿಸದೇ ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಕ್ರಾಂತಿ ಮಾಡಲು ಮುಂದಡಿ ಇಟ್ಟರು. ಪತ್ನಿ ವಿಲ್ಮಾ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದು ಪತ್ನಿಯ ಕೃಷಿ ಸಾಧನೆಗೆ ಪತಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಮನೆ ಆವರಣವೇ ಕೃಷಿ ಕ್ಷೇತ್ರ:
ಸಮಗ್ರ ಕೃಷಿಯನ್ನು ಅವಲಂಬಿಸಿಕೊಂಡಿರುವ ವಿಲ್ಮಾ ಅವರ ಮನೆ ಆವರಣವೇ ಕೃಷಿ ಸಾಧನೆಯ ಕ್ಷೇತ್ರ. ವಾಣಿಜ್ಯ ಬೆಳೆಗಳಾಗಿ ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ ಇದ್ದರೆ ಬೆಂಡೆ, ಅಲಸಂಡೆ, ಬದನೆ, ಹೀರೆಕಾಯಿ, ಅರಿವೆ ಸೊಪ್ಪು, ಬಸಳೆ, ಕಾಯಿಮೆಣಸು ಮೊದಲಾದ ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ರಾಂಬೂಟನ್, ಬಟರ್ ಪ್ರೂಟ್, ಡ್ರಾಗನ್ ಪ್ರೂಟ್ ಮಾವು, ಹಲಸು, ಗಜನಿಂಬೆ ಮೊದಲಾದ ದೇಶಿ ಹಾಗೂ ವಿದೇಶಿ ತಳಿಯ ಹಣ್ಣುಗಳ ಗಿಡಗಳನ್ನು ಬೆಳೆದಿದ್ದಾರೆ. ಮೊಲ, ದನ, ಗಿನಿಯಾ ಪಿಗ್, ಹಂದಿ, ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ. ಕೃಷಿಗೆ ಪೂರಕವಾಗಿ ಮಳೆನೀರು ಕೊಯ್ಲು, ಎರೆಹುಳು ಗೊಬ್ಬರ ಘಟಕ, ಗೋಬರ್ ಗ್ಯಾಸ್ ಘಟಕ, ರಬ್ಬರ್ ತೋಟದ ಮಧ್ಯೆ ೫೩೦ ಇಂಗು ಗುಂಡಿಗಳನ್ನು ಮಾಡಿದ್ದಾರೆ.
ಲೋಕಲ್ ಮಾರುಕಟ್ಟೆ;
ವಿಲ್ಮಾ ಹಾಗೂ ಅರುಣ್ ಅರುಣ್ ಅವರು ತಾವು ಬೆಳೆದ ಕೃಷಿಗೆ ಸ್ಥಳೀಯ ಮಾರುಕಟ್ಟೆಯನ್ನು ಕಂಡು ಕೊಂಡಿದ್ದಾರೆ. ಕೆಲವರು ತರಕಾರಿಗಳನ್ನು ಮನೆಗೆ ಬಂದು ಕೊಂಡು ಕೊಂಡರೆ, ಹೆಚ್ಚುವರಿ ತರಕಾರಿಗಳನ್ನು ಸ್ಥಳೀಯ ಅಂಗಡಿಗಳಿಗೆ ನೀಡುತ್ತಾರೆ.
ಉತಮ್ಮ ಕೃಷಿಕ ಮಹಿಳಾ ಪ್ರಶಸ್ತಿಗೆ ಆಯ್ಕೆ:
ಕೆಳದಿ ಶಿವಪ್ಪ ನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವಾವಿದ್ಯಾಲಯ ಶಿವಮೊಗ್ಗ ಕೃಷಿ ಕ್ಷೇತ್ರದಲ್ಲಿ ಸಾಧಕರಿಗೆ ಕೊಡಮಾಡುವ ಜಿಲ್ಲಾಮಟ್ಟದ ಉತ್ತಮ ಕೃಷಿಕ ಮಹಿಳಾ ಪ್ರಶಸ್ತಿಗೆ ವಿಲ್ಮಾ ಪ್ರಿಯಾ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 27 ರಿಂದ 29ರವರೆಗೆ ಶಿವಮೊಗ್ಗದ ನವಿಲೆ ಕ್ಯಾಂಪಸ್ನಲ್ಲಿ ನಡೆಯುವ ಕೃಷಿ- ತೋಟಗಾರಿಕಾ ಮೇಳದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
—