ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕುಲಾಲ ಗುರು ಸಮ್ಮಿಲನ, ಗುರುವಂದನೆ ಕಾರ್ಯಕ್ರಮ ಹಲವಾರು ವಿಶೇಷತೆಗಳೊಂದಿಗೆ ಗಮನ ಸೆಳೆಯಿತು.
ಬೆಳಿಗ್ಗೆ ಕಟ್ಟಡ ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ ಬಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನಾ ಆಟಗಳನ್ನು ನಡೆಸಲಾಯಿತು. ಶಿಕ್ಷಕರು, ಹಾಡಿ, ಕುಣಿದು, ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಬಳಿಕ ಎಲ್ಲಾ ಶಿಕ್ಷಕರಿಗೆ ಆರತಿ ಬೆಳಗಿ, ಕುಂಕುಮ ಹರಶಿನ ಹಚ್ಚಿ, ಪುಷ್ಪ ಸಮರ್ಪಿಸಿ, ಶಾಲು, ಉಡುಗೊರೆ ನೀಡಿ ವಿನೂತನ ರೀತಿಯಲ್ಲಿ ಗುರುವಂದನೆ ಸಲ್ಲಿಸಲಾಯಿತು.
ಇದೇ ಮೊದಲ ಬಾರಿಗೆ ಕುಲಾಲ ಸಂಘದ ವತಿಯಿಂದ ಕುಲಾಲ ಗುರು ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿದ್ದು ಸಮುದಾಯದ ಶಿಕ್ಷಕ ವೃಂದ ಈ ವಿನೂತನ ಕಾರ್ಯಕ್ರದಿಮದ ಪುಳಕಿತಗೊಂಡಿತು. ಪ್ರತಿದಿನ ಮನೆ, ಶಾಲೆಯ ಒತ್ತಡದ ಕೆಲಸ ಮಧ್ಯೆ ಕುಲಾಲ ಗುರು ಸಮ್ಮಿಲನ ಕಾರ್ಯಕ್ರಮದ ಮೂಲಕ ವಿವಿಧಾ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿಕ್ಷಕರು ಮನೋಲ್ಲಾಸದಿಂದ ಸಂಭ್ರಮಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಾರ್ಶ ಮೈದಾನ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು
ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಜಗದೀಶ್ಚಂದ್ರ ಕೆ.ಕೆ., ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಮುನ್ನಿಪ್ಪಾಡಿ, ಲಯನ್ಸ್ ಕ್ಲಬ್ ಪ್ರಾಂತೀಯ ರಾಯಭಾರಿ ದಾಮೋದರ ಬಿ.ಎಂ., ಉದ್ಯಮಿ ರಮೇಶ್ ಬಾಳೆಹಿತ್ಲು, ಮಹಿಳಾ ಸಮಿತಿ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ, ಸೇವಾದಳಪತಿ ರಾಜೇಶ್ ರಾಯಿ ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ಕೇಶವ ಮಾಸ್ತರ್ ಸ್ವಾಗತಿಸಿದರು, ರಮೇಶ್ ಸಾಲ್ಯಾನ್ ವಂದಿಸಿದರು, ದಾಮೋದರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದರು.