ಬಂಟ್ವಾಳ: ನೂತನವಾಗಿ ಜೀಣೋದ್ದಾರಗೊಳ್ಳುತ್ತಿರುವ ಕಕ್ಯಪದವು ಗರಡಿಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ಶಿಲ್ಪವೈಭವದ ಗರಡಿ ಕ್ಷೇತ್ರವಾಗಿ ಮೂಡಿ ಬರಲಿದೆ. ಈ ಹಿಂದಿನ ಗರಡಿಯನ್ನು ಈಗಾಗಲೇ ತೆರವುಗೊಳಿಸಲಾಗಿದ್ದು ನೂತನ ಶಿಲಾಮಯ ಗರಡಿ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಗರಡಿಗೆ ಕಾರ್ಕಳದ ವಿಶೇಷ ಬಿಳಿ ಶಿಲೆಯನ್ನು ಬಳಸಿಕೊಳ್ಳಲಾಗುತ್ತಿದೆ. ಸುಧಾಕರ ಆಚಾರ್ಯ ಅವರ ನೇತೃವದಲ್ಲಿ 40ಮಂದಿ ಶಿಲ್ಪಿಗಳ ತಂಡ ಸುಮಾರು ಒಂದೂವರೆ ವರ್ಷಗಳಿಂದ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಇಲ್ಲಿ ಆರಾಧಿಸಲ್ಪಡುವ ಶ್ರೀ ಕಡಂಬಿಲ್ತಾಯಿ ಹಾಗೂ ಕೊಡಮಣಿತ್ತಾಯಿ ದೈವಗಳ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅಡಿಪಾಯಕ್ಕೆ ಮೇಕಲ ಶಿಲೆ, ಬಳಸಲಾಗಿದೆ. ಪಾದೂಕ, ಜಗತ್ತಿ, ಪಡಿ, ವೇದಿಗೆ, ಗಣದ್ವಾರ ಗಳ ರಚನೆ ಕಾರ್ಯ ಪೂರ್ಣಗೊಂಡಿದ್ದು ಅದರಲ್ಲಿನ ಕುಸರಿ ಕೆತ್ತನೆಗಳು ಆಕರ್ಷಣೀಯವಾಗಿದೆ. ಗೋಡೆಗಳಲ್ಲಿ ಚಚೌಕದ ಇಟ್ಟಿಗೆ ರಚನೆ ಆಕೃತಿಯಿಂದ ಕಿಟಕಿಗಳನ್ನು ರಚಿಸಲಾಗಿದೆ. ಮದನಕೈ, ವೇದಿಗೆ ಶಿಲ್ಪಕಲೆಯ ಅಂದವನ್ನು ಹೆಚ್ಚಿಸಿದೆ. 86 ಇಂಚು ಎತ್ತರದ ಗೋಡೆ, 50 ಭೋದಿಗೆ ಕಂಬಗಳಿದ್ದು ಪ್ರತಿಯೊಂದು ಕಂಬಗಳಲ್ಲೂ ವಿಶಿಷ್ಟ ರೀತಿಯ ರಚನೆಗಳನ್ನು ಕಾಣ ಬಹುದಾಗಿದೆ. ಆನೆಮೊಗದ ಮೆಟ್ಟಿಲುಗಳ ರಚನೆ, ಗೋಡೆಗಳಲ್ಲಿ ಹೂವಿನ ರಚನೆ ಎಲ್ಲಾವೂ ಕಲ್ಲಿನ ಕೆತ್ತನೆಯ್ಲಲೀಯೇ ಮೂಡಿ ಬಂದಿರುವುದು ಇಲ್ಲಿನ ವಿಶೇಷ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಲಾಮಯ ಹಾಗೂ ವಿಶಿಷ್ಟ ವಿನ್ಯಾಸದಲ್ಲಿ ಮೂಡಿ ಬರುತ್ತಿರುವ ಗರಡಿ ಕ್ಷೇತ್ರ ಎನ್ನುವ ಕೀರ್ತಿಗೆ ಇದು ಪಾತ್ರವಾಗಲಿದ್ದು ವಿಶಾಲವಾದ ಸಮತಟ್ಟು ಜಮೀನನ್ನು ಈ ಗರಡಿ ಹೊಂದೆದೆ. ಮುಂದಿನ ಮೇ. 19ರಂದು ಗರಡಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜರುಗಲಿದೆ.
ಇಂದು ಪೂರ್ವಭಾವಿ ಸಭೆ:
ಶ್ರೀ ಕಡಂಬಿಲ್ತಾಯಿ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಬ್ರಹ್ಮಕಲಶದ ಪೂರ್ವ ತಯಾರಿಯ ಬಗ್ಗೆ ಸಮಾಲೋಚನ ಸಭೆ ಎ. 23ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ.