ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಕುಲಾಲ ಗುರು ಸಮ್ಮಿಲನ, ಗುರು ವಂದನೆ ಮತ್ತು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅ.1 ರಂದು ಭಾನುವಾರ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದೆ.
ಕುಲಾಲ ಶಿಕ್ಷಕ ಬಳಗವನ್ನು ಜತೆಯಾಗಿಸಿ, ಸಂಭ್ರಮಿಸಿ ಬೆಸೆಯುವ ಮೊದಲ ಪ್ರಯತ್ನ ಇದಾಗಿದ್ದು ಒಂದೇ ವೇದಿಕೆಯಲ್ಲಿ ಬಂಟ್ವಾಳ ತಾಲೂಕಿನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಇನ್ನಿತರ ಶಿಕ್ಷಕರ ಸಮಾಗಮ ನಡೆಯಲಿದೆ. ಶಿಕ್ಷಕರ ಕಲಾ ಪ್ರಾಕರಗಳಿಗೆ ವೇದಿಕೆಯೊದಗಿಸುವ ಆಶಯ ಹೊಂದಿಲಾಗಿದೆ. ಇದೇ ವೇಳೆ ಗುರು ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಯಲಿದ್ದು ಮನೆ ಶಾಲೆಯ ಒತ್ತಡದಿಂದ ಮನೋಲ್ಲಾಸ ನೀಡುವ ವಿಶಿಷ್ಠ ಹಾಗೂ ವಿನೂತನ ಕಾರ್ಯಕ್ರಮವಾಗಿ ಮೂಡಿ ಬರಲಿದೆ. ಶಿಕ್ಷಕರಿಗೆ ವೈವಿಧ್ಯಮಯ, ಆಕರ್ಷಕ ಸ್ಪರ್ಧೆ ಗಳು ನಡೆಯಲಿದೆ. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಬಂಟ್ವಾಳ ತಾಲೂಕು ಕುಲಾಲ ಸುಧಾಕರ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಜಗದೀಶ್ಚಂದ್ರ ಕೆ.ಕೆ., ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಮುನ್ನಿಪ್ಪಾಡಿ, ಲಯನ್ಸ್ ಕ್ಲಬ್ ಪ್ರಾಂತೀಯ ರಾಯಭಾರಿ ದಾಮೋದರ ಬಿ.ಎಂ., ಉದ್ಯಮಿ ರಮೇಶ್ ಬಾಳೆಹಿತ್ಲು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಾರ್ಶ ಮೈದಾನ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಅವರಿಗೆ ಸನ್ಮಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.