ಬಂಟ್ವಾಳ: ಹಿರಿಯ ರಂಗಕರ್ಮಿ ಮಂಜು ವಿಟ್ಲ ನಿಧನ ಹೊಂದಿದ ಹಿನ್ನೆಯಲ್ಲಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಮಂಜುವಿಟ್ಲ ಪ್ರೀತಿಯ ಸದ್ಗುಣವನ್ನು ಬೆಳೆಸಿಕೊಂಡವರು, ಮಾಣಿಲವೆಂಬ ಕುಗ್ರಾಮವನ್ನು ಪರಿವರ್ತಿಸಲು ಮಂಜು ವಿಟ್ಲ ಅವರು ನಗುನಗುತ್ತಾ ಸಮಾಜವನ್ನು ಎದುರಿಸಿದ ರೀತಿ ಮಾದರಿಯಾಗಿತ್ತು ಎಂದರು. ಪ್ರೀತಿಯೇ ದೇವರು ಎಂಬ ತತ್ವವನ್ನು ಅವರು ಅನೂಚಾನವಾಗಿ ಪಾಲಿಸುತ್ತಿದ್ದರು, ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಟಾ ವರ್ಧಂತಿ ಕಾರ್ಯಕ್ರಮದ ವೇದಿಕೆಗೆ ಅವರ ಹೆಸರಿಡಲಾಗುವುದು ಹಾಗೂ ಮಂಜಿ ವಿಟ್ಲ ಅವರ ನೆನೆಪಿಗಾಗಿ ಕಲಾವಿದರಿಗೆ ಯೋಜನೆ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಮಂಜು ವಿಟ್ಲ ಯಾರನ್ನೂ ದ್ವೇಷ ಮಾಡುವ ವ್ಯಕ್ತಿತ್ವದವರಲ್ಲ. ಲವಲವಿಕೆಯಿಂದ ತೊಡಗಿಸಿಕೊಳ್ಳುತ್ತಿದ್ದ ಅವರ ಮನುಷ್ಯ ಪ್ರೀತಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದರು.
ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್ ಪಾಸ್ತವಿಕವಾಗಿ ಮಾತನಾಡಿ ರಂಗಭೂಮಿಯ ಸೆಳೆತಕ್ಕೊಳಗಾದ ಮಂಜು ವಿಟ್ಲ ನಾನಾ ವಿಭಾಗಗಳಲ್ಲಿ ದುಡಿದವರು ಎಂದರು.
ಹಿರಿಯರಾದ ಕೈಯೂರು ನಾರಾಯಣ ಭಟ್, ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ, ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನಿಕಟಪೂರ್ವಾಧ್ಯಕ್ಷ ವಸಂತಕುಮಾರ್ ಶೆಟ್ಟಿ, ಪತ್ರಕರ್ತ ಹರೀಶ ಮಾಂಬಾಡಿ, ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್, ನಿವೃತ್ತ ಸಿಡಿಪಿಓ ಸುಧಾ ಜೋಷಿ ನುಡಿನಮನ ಸಲ್ಲಿಸಿದರು. ಪತ್ರಕರ್ತ ಸಂದೀಪ್ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಾಮೋದರ ಬಿ.ಎಂ. ವಂದಿಸಿದರು.