ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆ ಸಜೀಪಮೂಡ ಸುಭಾಷ್ ನಗರದ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿಬ್ಬಂದಿಗಳು ಹಾಗೂ ನಿರ್ದೇಶಕರ ಸಹಕಾರದಿಂದಾಗಿ ಬ್ಯಾಂಕ್ ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಎಲ್ಲಾ ಶಾಖೆಗಳು ಲಾಭದಾಯಕವಾಗಿದೆ ಎಂದು ತಿಳಿಸಿದರು.
ಶಾಖೆಗಳನ್ನು ಎಷ್ಟು ಬೇಕಾದರೂ ತೆರೆಯ ಬಹುದು ಆದರೆ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದಾಗ ಉತ್ತಮ ಸೇವೆ ನೀಡಲು ಸಾಧ್ಯವಿದ್ದು ನಮ್ಮ ಸಂಘ ಅಂತಹ ಅತ್ಯುತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಗ್ರಾಹಕರು ನಮ್ಮ ಸಂಘದ ಮೇಲೆ ಇಟ್ಟಿರುವ ನಂಬಿಕೆ ಇದಕ್ಕೆ ಸಾಕ್ಷಿ ಎಂದರು.
ಸಂಘಕ್ಕೆ ಸ್ವಂತ ಜಾಗ ಖರೀದಿಸಿದ್ದು ನೋಂದಾವಣೆಯೂ ಆಗಿದೆ. ಸರಕಾರದ ಸಹಾಯಧನ ಪಡೆದು ಇದರಲ್ಲಿ ಸಮುದಾಯ ಭವನ ನಿರ್ಮಿಸುವ ಯೋಚನೆ ಇದೆ. ಮುಂದಿನ ವರ್ಷದಿಂದಲೇ ಆ ಕೆಲಸ ಪ್ರಾರಂಭಿಸುವುದಾಗಿ ಅವರು ತಿಳಿಸಿದರು. ಮುಂದಿನ ದಿನದಲ್ಲಿ ಒಟ್ಟು 25 ಶಾಖೆಯನ್ನು ಹೊಂದಿ 100 ಮಂದಿ ಮಹಿಳೆಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ, 13ನೇ ಪುಣಚ ಶಾಖೆ ಶೀಘ್ರದಲ್ಲಿ ಆರಂಭಗೊಳ್ಳಲಿದ್ದು ಜಿಲ್ಲಾಮಟ್ಟಕ್ಕೆ ಬ್ಯಾಂಕ್ ಶಾಖೆಯನ್ನು ವಿಸ್ತರಣೆ ಮಾಡುವ ಚಿಂತನೆ ಇದೆ ಎಂದ ಅವರು ಬಿಲ್ಲವ ಸಮಾಜದ ಕಡು ಬಡವರ ಮಕ್ಕಳನ್ನು ದತ್ತು ಪಡೆದು ಉನ್ನತ ಶಿಕ್ಷಣ ನೀಡುವ ಕನಸಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್ ಸಿ. ನಾರಾಯಣ್ ಮಾತನಾಡಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸುವರ್ಣ ಯುಗದಲ್ಲಿದೆ. ಇತ್ತೀಚೆಗೆ ಎಸ್ಸಿಡಿಸಿಸಿ ಬ್ಯಾಂಕ್, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲ ಉತ್ತಮ ಸಂಘ ಎಂದು ಪ್ರಶಸ್ತಿ ನೀಡಿ ಗೌರವಿಸಿರುವುದು ಇದಕ್ಕೆ ಸಾಕ್ಷಿ ಎಂದರು. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಯಾಗಿದ್ದಾರೆ, ಅವರಿಂದ ಬಿಲ್ಲವ ಸಮಾಜಕ್ಕೆ ಗೌರವ ಬಂದಿದೆ, ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಉದಾರ ಮನಸ್ಸು ಅವರಲ್ಲಿದೆ ಎಂದರು. ಮಹಿಳೆಯರಿಗೆ ಉದ್ಯೋಗ ನೀಡಿ ಸಹಕಾರಿ ಸಂಘವನ್ನು ಲಾಭದಲ್ಲಿ ಮುನ್ನಡೆಸುತ್ತಿದ್ದಾರೆ. ಸಿಬ್ಬಂದಿ ಹಾಗೂ ನಿರ್ದೇಶಕರ ಸಹಕಾರದಿಂದ ಬ್ಯಾಂಕ್ ಉನ್ನತಿಗೇರಿದೆ. ಬೇರೆ ಸಮಾಜದವರು ನಮ್ಮ ಸಮಾಜದ ಬ್ಯಾಂಕ್ ಬಗ್ಗೆ ವಿಶ್ವಾಸ ಇರಿಸಿಕೊಳ್ಳುವುದು ಸಣ್ಣ ಸಾಧನೆಯಲ್ಲ. ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ ಸಂಘ ಕೋಟಿ ರೂಪಾಯಿ ಲಾಭವನ್ನು ಮಾಡಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಮೂರ್ತೆದಾರರಾದ ಶೀನಪ್ಪ ಪೂಜಾರಿ ಹಾಗೂ ಸಂಜೀವ ಪೂಜಾರಿ ಮುಳ್ಳಿಂಜ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿನ ಕಾರ್ಯತತ್ಪರತೆಯನ್ನು ಗುರುತಿಸಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಮತಾ ಜಿ. ಚೇಳೂರು ಹಾಗೂ ಪಜೀರು ಶಾಖೆಯ ವ್ಯವಸ್ಥಾಪಕಿ ವೈಶಾಲಿ ಹಾಗೂ ಸಂಘದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ೧೦೫ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ನಿರ್ದೇಶಕರಾದ ವಿಠಲ ಬೆಳ್ಚಡ, ಅಶೋಕ್ ಪೂಜಾರಿ ಕೋಮಾಲಿ, ಸುಜಾತ ಮೋಹನದಾಸ, ವಾಣಿ ವಸಂತ, ಅರುಣ್ ಕುಮಾರ್ ಎಂ., ಆಶಿಶ್ ಪೂಜಾರಿ ಉಪಸ್ಥಿತರಿದ್ದರು. ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ. ಲೆಕ್ಕಪತ್ರ ಮಂಡಿಸಿದರು, ಜಯಶಂಕರ್ ಕಾನ್ಸಲೆ ವಂದಿಸಿದರು, ಗಿರೀಶ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
ಶೇ.25 ಡಿವಿಡೆಂಡ್ ಘೋಷಣೆ:
ಪ್ರಸ್ತುತ ಸಂಘ ಒಟ್ಟು ೭೨೯೭ ಸದಸ್ಯರನ್ನು ಹೊಂದಿ 150 ಕೋಟಿ ರೂಪಾಯಿ ವ್ಯಾಪರ ವಹಿವಾಟನ್ನು ನಡೆಸಿದೆ. ೧೦,೬೫,೮೧೪ ರೂಪಾಯಿ ವಾರ್ಷಿಕ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಲಾಯಿತು. ವರದಿ ವರ್ಷದಲ್ಲಿ ೨೫,೬೨,೮೫,೮೬೦ ರೂಪಾಯಿ ಸಾಲ ನೀಡಿದ್ದು, ೨೯,೬೦,೭೭,೧೨೮ ರೂಪಾಯಿ ಠೇವಣಾತಿ ಇದೆ.
—