ಬಂಟ್ವಾಳ: ಅನಿಲ ಉತ್ಪಾದನೆ ಕ್ಷೇತ್ರಕ್ಕೆ ಮಾರ್ಕೆಟ್ ನ ಸಮಸ್ಯೆ ಇಲ್ಲ ಆದರೆ ಘಟಕ ಆರಂಭಿಸುವ ಎದೆಗಾರಿಕೆ ಬೇಕು. ಯುವಕರು ಈ ಕ್ಷೇತ್ರದಲ್ಲಿ ಮುಂದೆ ಬರಬೇಕು, . ಯುವಕರು ಇಂತಹ ಶಕ್ತಿ ಉತ್ಪಾದನೆಯನ್ನು ಮಾಡಿದಲ್ಲಿ ಕೇಂದ್ರ ಸರಕಾರ ಸಬ್ಸಿಡಿಯ ಮೂಲಕ ನೆರವು ನೀಡಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗಂಜಿಮಠದ ಒಡ್ಡೂರು ಫಾರ್ಮ್ ನಲ್ಲಿ ನಿರ್ಮಾಣಗೊಂಡಿರುವ ಒಡ್ಡೂರು ಎನರ್ಜಿ ಎನ್ನುವ ರಾಜ್ಯದ ಮೊದಲ ಸಿಎನ್ ಜಿ ( ಸಂಕುಚಿತ ನೈಸರ್ಗಿಕ ಅನಿಲ) ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲದರಲ್ಲೂ ಲಾಭ ಗಳಿಸುವ ದೃಷ್ಟಿಕೋನ ಇದ್ದಾಗ ಉದ್ಯಮ ಯಶಸ್ವಿಯಾಗಲು ಸಾಧ್ಯ. ಯಾವುದೇ ವಸ್ತುಗಳನ್ನು ಇತಿಮಿತಿಯಲ್ಲಿ ಬಳಸಿದರೆ ಸಮಸ್ಯೆ ಬರೋದಿಲ್ಲ, ಆದರೆ ಅತಿಯಾದರೆ ಸಮಸ್ಯೆಗಳೂ ಜಾಸ್ತಿಯಾಗುತ್ತದೆ.
ಪ್ರಧಾನಿ ಮೋದಿ ಗ್ರೀನ್ ಎನರ್ಜಿ ಯನ್ನು ತರಲು ದೇಶಾದ್ಯಂತ ಯೋಜನೆ ರೂಪಿಸಿದ್ದರು, 2030ರೊಳಗೆ ಗ್ರೀನ್ ಎನರ್ಜಿಯ ವಿಚಾರದಲ್ಲಿ ಭಾರತ ಸಂಪೂರ್ಣ ಗುರಿಯನ್ನು ತಲುಪಲಿದೆ ಎಂದು ತಿಳಿಸಿದ ಅವರು ರಾಜೇಶ್ ನಾಯಕ್ ಮುನ್ಸಿಪಾಲಿಟಿ ವೇಸ್ಟ್ ಗೆ ಬಂಗಾರದ ರೂಪ ಕೊಟ್ಟದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಸರ್ಕಾರ ಮಾಡಬೇಕಾದ ಯೋಜನೆ ಇಲ್ಲಿ ಕಾರ್ಯಗತವಾಗಿದ್ದು ಸರಕಾರಕ್ಕೆ ಪ್ರೇರಣೆ ಕೊಡುವ ಕಾರ್ಯ ಆಗಿದೆ. ಪ್ರಕೃತಿಗೆ ಪೂರಕವಾದಂತಹ, ಮಾದರಿ ಘಟಕವನ್ನು ಮಾಡಿದ್ದು ಬಂಟ್ವಾಳದ ತ್ಯಾಜ್ಯದ ಸಮಸ್ಯೆ ಬಗೆಹರಿಯಲಿದೆ. ಆತ್ಮನಿರ್ಭರ ಯೋಜನೆಯಡಿ ಮೋದಿಯವರ ಕಲ್ಪನೆಯನ್ನು ರಾಜೇಶ್ ನಾಯ್ಕ್ ಅನುಷ್ಢಾನಗೊಳಿಸಿದ್ದಾರೆ ಎಂದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜೇಶ್ ನಾಯ್ಕ್ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲಿಸಿದರು. ಅವರು ಮಾತನಾಡಿ ರಾಜೇಶ್ ನಾಯ್ಕ್ ಕೃಷಿಗೆ ಒಳಿತಾಗುವುದರ ಜೊತೆಗೆ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿದ್ದಾರೆ ಎಂದರು. ಪ್ರಕೃತಿಯಲ್ಲಿ ಯಾವುದು ತ್ಯಾಜ್ಯ ಎನ್ನುವಂತದಿಲ್ಲ. ಎಲ್ಲವೂ ಪುನರ್ ನವೀಕರಣ ಗೊಳ್ಳುತ್ತದೆ ಎಂದ ಅವರು ಇದೊಂದು ಸಾಹಸದ ಕೆಲಸ, ರಾಜೇಶ್ ನಾಯ್ಕ್ ರಿಸ್ಕ್ ತೆಗೆದುಕೊಂಡು ಈ ಕಾರ್ಯ ಕೈಗೆತ್ತಿಕೊಂಡಿದ್ದಾರೆ ಎಂದರು.
ಮಂಗಳೂರು ಶಾಸಕ ವೈ ಭರತ್ ಶೆಟ್ಟಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉಪಸ್ಥಿತರಿದ್ದರು.
ಶಾಸಕ ರಾಜೇಶ್ ನಾಯ್ಕ್ ಸ್ವಾಗತಿಸಿದರು, ಘಟಕದ ಆಡಳಿತ ಪಾಲುದಾರ ಉನ್ನತ್ ಆರ್. ನಾಯ್ಕ್ ವಂದಿಸಿದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಾಸಕ ಉಮನಾಥ ಕೋಟ್ಯಾನ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಸುದರ್ಶನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರು ಉಪಸ್ಥಿತರಿದ್ದರು.