ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿಯೇ ಅತ್ಯಂತ ಸ್ವಚ್ಛ ಬಡಾವಣೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸಂಚಯಗಿರಿಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ೭೭ನೇ ಸ್ವಾತಂತ್ರ್ಯ ಸಂಭ್ರಮವನ್ನು ವಿಜ್ರಂಭಣೆಯಿಂದ ಆಚರಿಸಯಿತು.
ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಸಂಚಯಗಿರಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ವಿ. ಶಂಕರ್ ಅವರು ಸ್ವಾತಂತ್ರ್ಯೋತ್ಸವದ ಬಗ್ಗೆ ಶುಭ ಸಂದೇಶ ನೀಡಿ ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತವನ್ನೇ ಹರಿಸಿದ್ದಾರೆ. ಅವರ ಬಲಿದಾನದ ಸಲುವಾಗಿ ಇಂದು ದೇಶ ಸ್ವತಂತ್ರ್ಯಗೊಂಡಿದೆ ಎಂದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಮೊದಲ್ಗೊಂಡು ೧೯೪೭ರವರೆಗೂ ನಿರಂತರ ಹೋರಾಟದ ಪರಿಣಾಮ ದೇಶ ಸ್ವತಂತ್ರ ಪಡೆಯಲು ಸಾಧ್ಯವಾಯಿತು. ಝಾನ್ಸಿರಾಣಿ ಲಕ್ಷ್ಮೀ ಬಾಯಿ, ತಾತ್ಯ ಟೋಪಿಯಂತಹ ಹೋರಾಟಗಾರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಯಿತು, ವೀರ ಸಾವರ್ಕರ್, ಭಗತ್ಸಿಂಗ್, ಮಹಾತ್ಮಗಾಂಧಿ, ಸುಭಾಷ್ಚಂದ್ರ ಭೋಷ್ರಂತಹ ಅಪ್ಪಟ ವೀರಯೋಧರ ಹೋರಾಟ ಹಾಗೂ ದೂರದೃಷ್ಟಿಯ ಚಿಂತನೆಯ ಫಲ ಇಂದು ಸ್ವತಂತ್ರ ಭಾರತ ನಮಗೆ ಲಭಿಸಿದೆ ಎಂದರು.
ಈ ಸಂದರ್ಭ ಬಂಟ್ವಾಳ ಪುರಸಭೆಯ ಆರೋಗ್ಯಾಧಿಕಾರಿ ರತ್ನಪ್ರಸಾದ್ ಅವರು ಬಟ್ಟೆ ಕೈ ಚೀಲವನ್ನು ಬಿಡುಗಡೆಗೊಳಿಸಿದರು. ಅವರು ಮಾತನಾಡಿ ಬಂಟ್ವಾಳ ಪುರಸಭೆ ಪ್ಲಾಸ್ಟಿಕ್ ಮುಕ್ತ ನಗರವಾಗಿ ಪರಿವರ್ತನೆಯಾಗುವಲ್ಲಿ ಸಂಚಯಗರಿಯ ಕೊಡುಗೆ ಅಪಾರ ಎಂದರು. ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಮಾತನಾಡಿ ಇಂದು ಕರ್ನಾಟಕದ ಭೂಪಟದಲ್ಲಿ ಸಂಚಯಗಿರಿ ಎನ್ನುವ ಚಿಕ್ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಇದೆ. ಈ ಬಡಾವಣೆಯ ಜನರ ಪರಿಶ್ರಮದಿಂದಾಗಿ ಇಂದು ಸ್ವಛ್ಚ ಬಡಾವಣೆ ಎನ್ನುವ ಹೆಸರು ಪ್ರಾಪ್ತಿಯಾಗಿದೆ.
ಮುಂದೆಯೂ ಎಲ್ಲರ ಸಹಕಾರ ಹೀಗೇಯೇ ಇರಲಿ ಎಂದು ತಿಳಿಸಿದರು. ಸಮಿತಿಯ ಉಪಾಧ್ಯಕ್ಷೆ ಪ್ರಿಯಾಲತಾ, ಕಾರ್ಯದರ್ಶಿ ಶಿವನಾಯ್ಕ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಸುಧಾಕರ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ದಾಮೋದರ್ ಎ ವಂದಿಸಿದರು, ಸಂಘದ ಸದಸ್ಯರಾಧ ಮುಲಾರಾಂ, ರಂಜನ್, ನಾರಾಯಣ ಹಾಗೂ ಎ. ದಾಮೋದರ್ ಬಟ್ಟೆ ಚೀಲಗಳನ್ನು ಕೊಡುಗೆಯಾಗಿ ನೀಡಿದರು.
—