ಬಂಟ್ವಾಳ: ಬಿಲ್ಲವ ಸಮಾಜದಲ್ಲಿರುವ ದೀನರು, ದುರ್ಬಲರಿಗೆ ನೆರವಾಗಲು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡಲು, ಆರ್ಥಿಕವಾಗಿ ದುರ್ಬಲರಾದ ಸ್ವಸಮಾಜದ ಬಂಧುಗಳಿಗೆ ಸಹಾಯಹಸ್ತ ಚಾಚಲು ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ ಎನ್ನುವ ಮಾದರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.
ಕಡೇಶಿವಾಲಯ ಗ್ರಾಮದ ನಡ್ಯೇಲು ಎಂಬಲ್ಲಿನ ಸುಮಾರು 2 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಸೇವಾ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಬಿಲ್ಲವ ಸಮಾಜದ ಬಂಧುಗಳು ಸೇರಿಕೊಂಡು ಬತ್ತದ ಸಾಗುವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಬೇಸಾಯದ ಮೂಲಕ ಬಂದ ಇಳುವರಿ ಹಾಗೂ ಬೈ ಹುಲನ್ನು ಮಾರಿ ಆ ಮೂಲಕ ಗಳಿಸಿದ ಆದಾಯವನ್ನು ಮತ್ತೆ ಸಮಾಜದ ಬಡ ಜನರಿಗೆ, ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ. ಯುವ ಸಮುದಾಯವನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜದ ಬಡವರ ಸಂಕಷ್ಟಕ್ಕೂ ಸ್ಪಂದಿಸುವ ಸೇವಾ ಕಾರ್ಯಕ್ಕೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ವೇದಿಕೆಯೊದಗಿಸಿದೆ.
ಹಿರಿಯರೊಂದಿಗೆ ಕಿರಿಯರ ಬೆಸುಗೆ:
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನಡೆಸುವ ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ ಕಾರ್ಯಕ್ರಮ ಹಿರಿಯರೊಂದಿಗೆ ಕಿರಿಯರು ಬೆಸೆಯುವ ಕಾರ್ಯಕ್ರಮವಾಗಿಯೂ ಗಮನ ಸೆಳೆಯುತ್ತಿದೆ. ವಿಶಾಲವಾದ ಗದ್ದೆಯಲ್ಲಿ ಹಿರಿಯರು ನೇಜಿ ನಾಟಿ ಮಾಡುವಾಗ ಯುವಕ, ಯುವತಿಯರು, ಮಕ್ಕಳು ಅವರೊಂದಿಗೆ ಸೇರಿಕೊಳ್ಳುತ್ತಾರೆ. ಅವಸಾನದ ಅಂಚಿಗೆ ಸಾಗುತ್ತಿರುವ ತುಳುನಾಡಿನ ಕೃಷಿ ಪದ್ದತಿಯನ್ನು, ಕೃಷಿಯೊಂದಿಗೆ ಮಿಳಿತವಾಗಿದ್ದ ತುಳುನಾಡಿನ ಆಚರಣೆಗಳನ್ನು ಕಿರಿಯ ತಲೆಮಾರು ತಿಳಿದುಕೊಳ್ಳಲು ಈ ಕಾರ್ಯಕ್ರಮದಿಂದ ಸಾಧ್ಯವಾಗಿದೆ. ನೇಜಿ ನಾಟಿ ಮಾಡುವಾಗ ಹಿರಿಯರು ಪಾಡ್ದಾನ ಹಾಡುತ್ತಿದ್ದರೆ ಕಿರಿಯರು ಅವರ ಜೊತೆ ಸ್ವರ ಸೇರಿಸುವ ಮೂಲಕ ತುಳುನಾಡಿನ ಸಂಸ್ಕೃತಿಯ ರಕ್ಷಣೆಯೂ ಆಗುತ್ತಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು 400 ಮಂದಿ ಭಾಗವಹಿಸಿದ್ದಾರೆ.
ಶ್ರಮದ ಫಲ ಸಮಾಜಕ್ಕೆ ಅರ್ಪಣೆ:
ಕಳೆದ ವರ್ಷದ ಭತ್ತದ ಸಾಗುವಳಿ ಮಾಡಿ ಬಂದ ಇಳುವರಿ ಹಾಗೂ ಬೈ ಹುಲ್ಲು ಮಾರಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಆದಾಯ ಬಂದಿದ್ದು ಅದಕ್ಕೆ ಟ್ರಸ್ಟ್ ಸದಸ್ಯರು ಇನ್ನಷ್ಟು ಮೊತ್ತವನ್ನು ಸೇರಿಸಿ ಮತ್ತೆ ಸಮಾಜದ ಸೇವಾ ಕಾರ್ಯಗಳಿಗೆ ಅರ್ಪಿಸುವ ಪುಣ್ಯಕಾರ್ಯ ಮಾಡಿದ್ದಾರೆ. ಈ ಬಾರಿಯೂ 2 ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಕೃಷಿ ಮಾಡಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಎಲ್ಲರ ಬೆವರಿನ ಪರಿಶ್ರಮವನ್ನು ಸಮಾಜಮುಖಿ, ಶೈಕ್ಷಣಿಕ ಸೇವಾ ಕಾರ್ಯಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ಇದರ ಜೊತೆ ಶ್ರಮದಾನ ಮತ್ತಿತರ ಸಮಾಜಮುಖಿ ಚಟುವಟಿಕೆಯಲ್ಲಿ ಟ್ರಸ್ಟ್ ಸದಸ್ಯರು ತೊಡಗಿಸಿಕೊಂಡಿದ್ದಾರೆ.
ಕೆಸರು ಗದ್ದೆ ಕ್ರೀಡಾಕೂಟ:
ಸೇವಾ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ನ ಸಾಗುವಳಿ ಕಾರ್ಯಕ್ರಮದತ್ತ ಯುವ ಜನರನ್ನು ಹಾಗೂ ಕಿರಿಯ ತಲೆಮಾರನ್ನು ಆಕರ್ಷಿಸಲು ಈ ವರ್ಷ ಮೊದಲ ಬಾರಿಗೆ ಕೆಸರು ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಸಭಾಕಾರ್ಯಕ್ರಮದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಯುವಕ ಯುವತಿಯರು ಕೆಸರು ಗದ್ದೆಯಲ್ಲಿ ಆಟವಾಡಿ ಸಂಭ್ರಮಿಸಿದರು.ದೀ ಸಂದರ್ಭ ಟ್ರಸ್ಟ್ ಅಧ್ಯಕ್ಷ ದಿನೇಶ್ ಸುರ್ಲಾಜೆ, ಕಾರ್ಯದರ್ಶಿ ಯಶವಂತ ಪತ್ತ್ಕೊಡಂಗೆ, ಸಂಚಾಲಕ ವಿದ್ಯಾಧರ ಪೂಜಾರಿ, ಗೌರವಾಧ್ಯಕ್ಷ ಮೋಹನ್ ಕಲ್ಲಾಜೆ ಹಾಗೂ ಟ್ರಸ್ಟಿಗಳು, ಸದಸ್ಯರು ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ದಿನೇಶ್ ಸುರ್ಲಾಜೆ ಮಾತನಾಡಿ ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ ಇದು ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ನ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 2021ರಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಕೃಷಿ ಚಟುವಟಿಕೆಯ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಇದರೊಂದಿಗೆ ಹಲವಾರು ಸೇವಾ ಕಾರ್ಯಗಳನ್ನು ನಡೆಸಿದ್ದೇವೆ. ಈ ವರ್ಷ ವಿಶೇಷವಾಗಿ ಕೆಸರು ಕ್ರೀಡಾಕೂಟ ಹಮ್ಮಿಕೊಂಡಿದ್ದೇವೆ ಎಂದರು.