ಬಂಟ್ವಾಳ: ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ದವಸಧಾನ್ಯ ವಿತರಣಾ ಕಾರ್ಯಕ್ರಮ ಶನಿವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ 2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ಕಾರ್ಯಕ್ರಮದಂಗವಾಗಿ ಪ್ರಧಾನಮಂತ್ರಿಯವರ ಕರೆಯಂತೆ ನಿಕ್ಷಯ ಮಿತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ವೈದ್ಯರು, ಸಮಾಜಸೇವಾ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಹುಟ್ಟುವಾಗ ಯಾರಿಗೂ ರೋಗಗಳಿರುವುದಿಲ್ಲ. ಬಳಿಕ ನಮ್ನ ಆಹಾರ, ಪರಿಸರದಲ್ಲಿನ ಅಸ್ವಚ್ಚತೆಯಿಂದಾಗಿ ರೋಗಕ್ಕೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಉತ್ತಮ ಆಹಾರ ಪದ್ದತಿ, ಸರಿಯಾದ ಔಷಧಿ ಸೇವನೆ, ಒತ್ತಡಗಳನ್ನು ನಿವಾರಿಸಿ ಮನಸ್ಸನ್ನು ಕೇಂದ್ರೀಕರಿಸಿದರೆ ನಮ್ಮ ಆರೋಗ್ಯ ಉತ್ತಮವಾಗಲು ಸಾಧ್ಯವಿದೆ. ಇಲ್ಲಿ ನೀಡುವ ಪೌಷ್ಠಿಕ ಆಹಾರವನ್ನು ಸದ್ಬಳಕೆ ಮಾಡಿಕೊಂಡಾಗ ರೋಗ ನಿವಾರಿಸಿಕೊಂಡು ಸಮಾಜದಲ್ಲಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ 11 ತಿಂಗಳಿನಿಂದ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ಅನೇಕ ಮಂದಿ ದಾನಿಗಳು ಇಂತಹ ಸೇವಾ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಅಜಯ್ ಮಲ್ಯ ಮಾತನಾಡಿದರು. ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಸುಕುಮಾರ್ ಅರ್ಕುಳ, ಕೇಶವ ದೋಟ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ವಂದಿಸಿದರು.
ಬಂಟ್ವಾಳ ಆರೋಗ್ಯ ಇಲಾಖೆಯ ಕ್ಷಯ ರೋಗ ಮೇಲ್ವಿಚಾರಕರಾದ ಡೇವಿಡ್, ಕೃಷ್ಣಮೂರ್ತಿ ಸಹಕರಿಸಿದರು. ಈ ಸಂದರ್ಭ ಕೇಂದ್ರ ಸರಕಾರದ ಕ್ಷಯ ಮುಕ್ತ ಭಾರತ ಯೋಜನೆಗೆ ನಿಯುಕ್ತಿಗೊಂಡ ಕೆಎಂಸಿ ಆಸ್ಪತ್ರೆಯ ವೈದ್ಯರ ವೀಕ್ಷಕ ತಂಡ ಕ್ಷಯ ರೋಗಿಗಳ ಆರೋಗ್ಯ ವಿಚಾರಣೆ ನಡೆಸಿದರು. ಪ್ರಮುಖರಾದ ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಅಶೋಕ್ ಶೆಟ್ಟಿ ಫರಂಗಿಪೇಟೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಉಮೆಶ್ ಸೇಮಿತ, ಕೃಷ್ಣ ತುಪ್ಪೆಕಲ್ಲು, ಗಾಯತ್ರಿ ಚಿದಾನಂದ, ವಿದ್ಯಾಶಿವರಾಜ್, ಬಸವರಾಜ್ ಉಪಸ್ಥಿತರಿದ್ದರು.