ಬಂಟ್ವಾಳ: ಪುರಾಣ ಪ್ರಸಿದ್ದ ಪರ್ವತ ಕ್ಷೇತ್ರ ಬಂಟ್ವಾಳ ತಾಲೂಕಿನ ನರಹರಿ ಪರ್ವತದ ಮೇಲಿರುವ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ತೀರ್ಥ ಸೋಮವಾರ ಸ್ನಾನ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ದೇವಸ್ಥಾನದ ತೀರ್ಥ ಬಾವಿಗಳಾದ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ದೇವರ ದರ್ಶನ ಪಡೆದು ಉರಿ ಹಗ್ಗ ಸೇವೆ ಸಹಿತ ವಿವಿಧ ವಿಶೇಷ ಸೇವೆಗಳನ್ನು ಸಲ್ಲಿಸಿದರು.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲಡ್ಕ ಮದ್ಯ ಭಾಗದಲ್ಲಿ ಅಮ್ಟೂರು, ಗೋಳ್ತಮಜಲು ಪಾಣೆಮಂಗಳೂರು ಈ ಮೂರು ಗ್ರಾಮಗಳ ತ್ರಿವೇಣಿ ಸಂಗಮದಂತೆ ದಟ್ಟವಾದ ಕಾಡಿನ ಮಧ್ಯದಲ್ಲಿ ಮಹಾಶಿವಲಿಂಗದಂತೆ ಕಂಗೊಳಿಸುತ್ತಿರುವ ಪುಣ್ಯ ಕ್ಷೇತ್ರವೇ ಶ್ರೀ ನರಹರಿ ಪರ್ವತ. ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ಎಲ್ಲಾ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತ ದಕ್ಷಿಣ ಭಾರತದ ತೀರ್ಥ ಯಾತ್ರೆಯ ಸಂದರ್ಭ ನರಹರಿ ಬೆಟ್ಟಕ್ಕೆ ಶ್ರೀ ಕೃಷ್ಣ ಜೊತೆ ಭೇಟಿ ನೀಡಿದ ಕಾರಣಕ್ಕೆ ಈ ಪರ್ವತಕ್ಕೆ ನರಹರಿ ಬೆಟ್ಟವೆಂದು ಹೆಸರು ಬಂದಿದೆ. ಶ್ರೀ ಕೃಷ್ಣನು ತನ್ನ ಕೈಯಲಿದ್ದ ಆಯುಧಗಳಾದ ಶಂಖ, ಚಕ್ರ ಗಧಾ, ಪದ್ಮಗಳಿಂದ ಇಲ್ಲಿನ ತೀರ್ಥ ಕೆರೆಗಳನ್ನು ರಚಿಸಿ, ತೀರ್ಥಸ್ನಾನ ಗೈದು ಶುಚಿರ್ಭೂತರಾಗಿ ತಾವು ಪ್ರತಿಷ್ಠಾಪಿಸಿದ ಶ್ರೀ ಸದಾಶಿವ ದೇವರಿಗೆ ಅಭಿಷೇಕ ಮಾಡಿ ಪೂಜಿಸಿದರೆಂದು ಪ್ರತೀತಿ ಇದೆ. ಆಟಿ ಅಮಾವಸ್ಯೆಯ ದಿನದಂದು ತೀರ್ಥ ಸ್ನಾನ ಮಾಡುವುದರಿಂದ ಪುಣ್ಯ ಸಂಪಾದನೆಯೊಂದಿಗೆ ಚರ್ಮಾದಿ ರೋಗಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ತೀರ್ಥ ಸ್ನಾನ ಮಾಡುತ್ತಾರೆ. ವಿಶೇಷವಾಗಿ ನೂತನವಾಗಿ ವಿವಾಹವಾದ ವಧುವರರ ತೀರ್ಥಸ್ನಾನ ಮಾಡಿ ದೇವರ ದರ್ಶನ ಮಾಡುವುದು ವಾಡಿಕೆ. ಉಬ್ಬಸ ರೋಗದಿಂದ ಬಳಲುವವರು ಉರಿ ಹಗ್ಗವನ್ನು ಸಮರ್ಪಿಸುವುದರಿಂದ ರೋಗ ಗುಣಮುಖವಾಗುತ್ತದೆ ಎನ್ನುವ ನಂಬಿಕೆಯಲ್ಲಿ ದೇವರಿಗೆ ಉರಿ ಹಗ್ಗವನ್ನು ಸಮರ್ಪಿಸುವುದು ಪರಂಪರೆಯಿಂದ ನಡೆದುಕೊಂಡು ಬರುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ತೀರ್ಥಸ್ನಾನ ಮಾಡುವ ದೃಶ್ಯ ಕಂಡು ಬಂದಿದೆ. ಪ್ರಧಾನ ಅರ್ಚಕರಾದ ಎನ್ಜಿ. ಪರಮೇಶ್ವರ ಮಯ್ಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ಸುದ್ದಿಗಾರರೊಂದಿಗೆ ಮಾತನಾಡಿ ನರಹರಿ ಕ್ಷೇತ್ರ ಅತ್ಯಂತ ಪುರಾತನ ಕ್ಷೇತ್ರವಾಗಿದ್ದು ಆಟಿ ಅಮಾವಾಸ್ಯೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ತೀರ್ಥಸ್ನಾನ ಮಾಡುತ್ತಾರೆ ಎಂದರು. ೧೯೯೨ರಲ್ಲಿ ದೇವಸ್ಥಾನ ಜೀಣೋದ್ಧಾರ ಕಾರ್ಯ ನಡೆದಿದ್ದು ಪ್ರಸ್ತುತ ಮತ್ತೊಮೆ ದೇವಸ್ಥಾನದಲ್ಲಿ ಜೀಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಆದಷ್ಟು ಶೀಘ್ರ ಜೀಣೋದ್ಧಾರ ಕಾರ್ಯ ಮುಗಿದು ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ತಿಳಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಸೀತರಾಮ ಶೆಟ್ಟಿ, ಶಂಕರ ಆಚಾರ್ಯ, ಕಿಶೋರ್ ಕುದ್ಮುಲ್, ಉತ್ಸವ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಪ್ರಮುಖರಾದ ಪ್ರತಿಭಾ ಎ. ರೈ, ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮತ್ತಿತರರು