ಬಂಟ್ವಾಳ: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಂಕ ಗಳಿಕೆ ಜೊತೆಗೆ ತಂದೆ-ತಾಯಿ ಮತ್ತು ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನವೀನ್ ಕೋಟ್ಯಾನ್ ಹೇಳಿದರು.
ಇಲ್ಲಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿವಿಧ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಸಹಿತ ಬ್ಯಾಗ್ ಮತ್ತು ಕೊಡೆ ಮತ್ತಿತರ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕಿ ನಾಗವೇಣಿ ಮಿಜಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸುಸಜ್ಜಿತ ಮೂಲ ಸೌಕರ್ಯವೂ ಅಗತ್ಯವಿದೆ ಎಂದರು.
ಇದೇ ವೇಳೆ ನಾರಾಯಣಗುರು ವಿಚಾರ ವೇದಿಕೆ ಸಹಿತ ವಿವಿಧ ದಾನಿಗಳು ಕೊಡುಗೆ ನೀಡಿದ ಉಚಿತ ಪುಸ್ತಕ, ಬ್ಯಾಕ್, ಕೊಡೆ, ಸ್ಲೇಟು, ಬೆಲ್ಟ್, ಗುರುತಿನ ಚೀಟಿ, ಕ್ರೆಯಾನ್ಸ್ ಮತ್ತಿತರ ಸಾಮಾಗ್ರಿ ವಿತರಿಸಲಾಯಿತು.
ವೇದಿಕೆ ಗೌರವ ಸಲಹೆಗಾರ ಪ್ರೇಮನಾಥ್ ಕೆ. ಮಾತನಾಡಿ, ಗ್ರಾಮಿಣ ಸರ್ಕಾರಿ ಶಾಲೆಗಳನ್ನು ವಿವಿಧ ಸಂಘ ಸಂಸ್ಥೆಗಳು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ತಿಳಿಸಿದರು. ಕೋಶಾಧಿಕಾರಿ ಅಶೋಕ ಪೂಜಾರಿ, ಕಾರ್ಯದರ್ಶಿ ರೋಹಿತ್, ಸಂಗಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯೆ ಶಾಂತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಮಿತಾ, ಮಾಜಿ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿಗಾರ್, ಪ್ರಮುಖರಾದ ಜಿ.ಸುರೇಶ ಸಾಲ್ಯಾನ್, ಪ್ರಶಾಂತ್ ಶೆಟ್ಟಿ ಸಿದ್ಧಕಟ್ಟೆ, ಹೇಮಾವತಿ ಶೆಟ್ಟಿಗಾರ್ ಮತ್ತಿತರರು ಇದ್ದರು.
ಮುಖ್ಯಶಿಕ್ಷಕಿ ವಿನಿತಾ ಅರ್ಕುಳ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.