ಬಂಟ್ವಾಳ: ವಿನಯ ಇದ್ದಾಗ ಯೋಗ್ಯತೆ ಬರುತ್ತದೆ, ಯೋಗ್ಯತೆ ಇದ್ದಾಗ ದಾನಧರ್ಮ ಮಾಡಬೇಕೆನಿಸುತ್ತದೆ. ದಾನಧರ್ಮದಿಂದ ಆತ್ಮ ತೃಪ್ತಿ ಸಿಗುತ್ತದೆ. ಆಗ ಮನುಷ್ಯ ಸುಖಿಯಾಗುತ್ತಾನೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ಕಾರಂತ್ ಹೇಳಿದರು.
ರೋಟರಿ ಬಿ.ಎ.ಸೋಮಯಾಜಿ ಮೆಮೋರಿಯಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ರೋಟರಿ ಕ್ಲಬ್ ಬಂಟ್ವಾಳ ಕ್ಕೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಪತ್ತು ಇರುವುದು ಹರಿಯಲು, ಬದುಕಿಗಾಗಿ ಸಂಪತ್ತು ಇರಬೇಕೆ ವಿನಃ ಸಂಪತ್ತಿಗಾಗಿ ಬದುಕಿರಬಾರದು. ಅದನ್ನು ರೋಟರಿ ಸಂಸ್ಥೆ ಕಲಿಸಿಕೊಡುತ್ತದೆ ಎಂದರು. ಜಿಲ್ಲಾ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ ರೋಟರಿ ಕ್ಲಬ್ ಬಂಟ್ವಾಳದ ಸದಸ್ಯ ರೋಟರಿ ಜಿಲ್ಲೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವುದು ನಮಗೆ ಹೆಮ್ಮೆ ಎಂದು ತಿಳಿಸಿದರು. ಪ್ರಥಮ ಮಹಿಳೆ ವಾಣಿ ಕಾರಂತ್ ಉಪಸ್ಥಿತರಿದ್ದರು.
ಈ ಸಂದರ್ಭ ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲಾಯ. ಮೇಜರ್ ಡೋನರ್ ಮತ್ತಿತರ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಕಣ್ಣಿನ ಶಿಬಿರಗಳಿಗೆ ಸಹಕರಿಸಿದ ಅನಿಲ್ ರಾಮಾನುಜಂ ದಂಪತಿಯನ್ನು ಸನ್ಮಾನಿಸಲಾಯಿತು. ಸ್ಕೇಟಿಂಗ್ ನಲ್ಲಿ ಚಿನ್ನದ ಪದಕ ಪಡೆದ ಬಾಲ ಪ್ರತಿಭೆ ಐಶಾನಿಯನ್ನು ಅಭಿನಂದಿಸಲಾಯಿತು. ವಲಯ ಲೆಫ್ಟಿನೆಂಟ್ ಮುಹಮ್ಮದ್ ವಳವೂರು. ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಜಿಲ್ಲಾ ಪ್ರಥಮ ಮಹಿಳೆ ವಾಣಿ ಕಾರಂತ್ ದಂಪತಿಯನ್ನು ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಭಾನುಶಂಕರ್ ಬನ್ನಿಂತ್ತಾಯ ವಾರ್ಷಿಕ ವರದಿ ವಾಚಿಸಿ, ವಂದಿಸಿದರು. ಸದಸ್ಯ ಅಹಮ್ಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.
ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿಯಿಂದ ತೆರೆದ ವಾಹನದ ಮೂಲಕ ಗವರ್ನರ್ ದಂಪತಿಯನ್ನು ಕಾರ್ಯಕ್ರಮ ನಡೆಯುವ ರೋಟರಿ ಬಿ.ಎ.ಸೋಮಯಾಜಿ ಮೆಮರಿಯಲ್ ಸಭಾಂಗಣಕ್ಕೆ ಕರೆತರಲಾಯಿತು. ಆರತಿ ಬೆಳಗಿ, ಪುಷ್ಪ ಸಮರ್ಪಿಸಿ ವಿಶೇಷ ರೀತಿಯಲ್ಲಿ ಗವರ್ನರ್ ಅವರನ್ನು ಬರ ಮಾಡಿಕೊಳ್ಳಲಾಯಿತು.
—