
ಬಂಟ್ವಾಳ: ಈ ಹಿಂದೆ ಬಂಟ್ವಾಳ ಸೇರಿದಂತೆ ಐದು ಬಾರಿ ವೈಶಿಷ್ಟ್ಯಪೂರ್ಣ ಹಲಸು ಮೇಳ ಯಶಸ್ವಿಯಾಗಿ ನೆರವೇರಿಸಿ ಜೂ. 17 ರಿಂದ 18ರತನಕ ಪುತ್ತೂರು ಜೈನ ಭವನ ದಲ್ಲಿ ಜಿಲ್ಲಾ ಮಟ್ಟದ 6 ನೇ ‘ಹಲಸು ಹಣ್ಣು ಮೇಳ’ ಆಯೋಜಿಸಲಾಗಿದೆ ಎಂದು ಪುತ್ತೂರು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ನವತೇಜ ಟ್ರಸ್ಟ್ ಸಹಿತ ಜೆಸಿಐ ಪುತ್ತೂರು ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು ಇದರ ಸಹಭಾಗಿತ್ವದಲ್ಲಿ ನಡೆಯುವ ಈ ಮೇಳದಲ್ಲಿ ಸುಮಾರು ೩೦ಕ್ಕೂ ಮಿಕ್ಕಿ ಮಳಿಗೆಗಳಲ್ಲಿ ತಾಜಾ ಹಲಸಿನ ಉತ್ಪನ್ನಗಳ ಮಾರಾಟವಿದೆ. ಯಾವುದೇ ಕೃತಕ ಬಣ್ಣ ಬಳಸದೆ ಹಲಸಿನ ಗಟ್ಟಿ, ಹಲ್ವ, ದೋಸೆ, ಮಂಚೂರಿ, ಕಬಾಬ್, ಪಾಯಸ, ಐಸ್ ಕ್ರೀಂ, ಫಿಜಾ, ಬರ್ಗರ್ ಮತ್ತಿತರ ವೈಶಿಷ್ಟ್ಯಪೂರ್ಣ ತಿಂಡಿ ತಿನಿಸು ಗ್ರಾಹಕರನ್ನು ಆಕರ್ಷಿಸಲಿದೆ ಎಂದರು.

ಇದೇ ವೇಳೆ ವಿವಿಧ ಬಗೆಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮಳಿಗೆ, ಹೊಸ ತಳಿ ಪರಿಚಯ, ನರ್ಸರಿ ಗಿಡಗಳ ಪ್ರದರ್ಶನ ಮತ್ತು ಮಾರಾಟ, ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಹಲಸಿನ ಹಣ್ಣಿನ ಸೊಳೆ ತಿನ್ನುವ ಸ್ಪರ್ಧೆ, ವಿಶೇಷ ಹಲಸಿನ ಖಾದ್ಯ ತಯಾರಿ ಸ್ಪರ್ಧೆ ನಡೆಯಲಿದೆ ಎಮದು ಅವರು ವಿವರಿಸಿದರು.
ಅಂದು ಬೆಳಿಗ್ಗೆ 8.30 ಗಂಟೆಗೆ ಕೇಶವ ಪ್ರಸಾದ್ ಮುಳಿಯ ದಂಪತಿ ಮಳಿಗೆ ಉದ್ಘಾಟಿಸಲಿದ್ದು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಂಜಯಕುಮಾರ್ ಸಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ತಾಂತ್ರಿಕ ಸಮಾವೇಶ, 4ಗಂಟೆಗೆ ಸಮಾರೋಪ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ, ನವನೀತ ನರ್ಸರಿ ಮುಖ್ಯಸ್ಥ ವೇಣುಗೋಪಾಲ್ ಎಸ್.ಜಿ. ಇದ್ದರು.
